MUSTHAFA HASAN ALQADRI OFFICIAL : 06/09/22

Translate

Thursday, June 9, 2022

ಶಿಹಾಬ್‌ರನ್ನು ಸ್ವಾಗತಿಸುವ ಮೊದಲು.

 *ಶಿಹಾಬ್‌ರನ್ನು ಸ್ವಾಗತಿಸುವ ಮೊದಲು..*



ಕಾಲ್ನಡಿಗೆಯ ಮೂಲಕ ಹಜ್‌ ಕರ್ಮಕ್ಕೆ ಹೊರಟ ಕೇರಳದ ಶಿಹಾಬ್ ಈಗಾಗಲೇ ಕರ್ನಾಟಕದ ಗಡಿ ದಾಟಲಿದ್ದಾರೆ. ಕೇರಳಿಗರು ಈ ಮೂವತ್ತರ ತರುಣನ ಸಾಹಸಿಕ ಯಾತ್ರೆಗೆ ನೀಡಿದ್ದು ಭವ್ಯ ಸ್ವಾಗತ, ಹೃದ್ಯ ಬೀಳ್ಕೊಡುಗೆ. ಅಲ್ಲಿ ಧರ್ಮ, ಪಕ್ಷಗಳನ್ನು ಮೀರಿ ದಾರಿಯುದ್ದಕ್ಕೂ ಶಿಹಾಬ್ ಸ್ವೀಕರಿಸಲ್ಪಟ್ಟಿದ್ದಾನೆ. ಆದರೆ ಕರ್ನಾಟಕದ ವಿಚಾರಕ್ಕೆ ಬಂದರೆ ಇಲ್ಲಿನ ಸನ್ನಿವೇಶಕ್ಕೆ ಮತೀಯ, ರಾಜಕೀಯ ಚಹರೆಯಿದೆ. ಅದರಲ್ಲೂ ಕರಾವಳಿ ಕೋಮು ಸೂಕ್ಷ್ಮ ಪ್ರದೇಶ. ಮಾಧ್ಯಮಗಳ ಅತ್ಯಾಚಾರದಿಂದ ಇಲ್ಲಿನ ಮತೀಯ ವಾತಾವರಣ ಈಗಾಗಲೇ ಮಲಿನವಾಗಿ ಬಿಟ್ಟಿದೆ. ಹಾಗಿರುವಾಗ ಕೇರಳದ ಭವ್ಯ ಬೀಳ್ಕೊಡುಗೆಗೂ ಕರ್ನಾಕಟದ ಬೀಳ್ಕೊಡುಗೆಗೂ ಅನೇಕ ಭಿನ್ನತೆಗಳಿವೆ. ಅಲ್ಲಿ ಆತನನ್ನು ತಕ್ಬೀರ್‌, ತಲ್ಬಿಯತ್, ಸ್ವಲಾತ್‌ಗಳಿಂದ ಬರಮಾಡಿಕೊಂಡಿದ್ದಾರೆ. ಆದರೆ ಇಲ್ಲಿ ಪುಂಡರ ಮುಂದೆ ತಕ್ಬೀರ್ ಕರೆದ ಹುಡುಗಿಯೊಬ್ಬಳು ಈಗಲೂ ಮಾಧ್ಯಮಗಳ ಶೋಷಣೆಗೆ ಒಳಗಾಗುತ್ತಿದ್ದಾಳೆ. ಹೀಗಿರುವಾಗ ನಾವು ಆತನನ್ನು ಸ್ವೀಕರಿಸಬೇಕಾದ ರೀತಿ ಹೇಗಿರಬೇಕೆಂಬುದು ಪ್ರತಿಯೊಬ್ಬನಿಗೂ ತಿಳಿದಿರಬೇಕು. ಅತಿಥಿ ಸ್ವೀಕಾರ ಮತ್ತು ಸತ್ಕಾರದಲ್ಲಿ ಕರಾವಳಿಗರಾದ ನಾವು ಒಂದು ಹೆಜ್ಜೆ ಮುಂದೆಯೇ. ಆದರೆ ಶಿಹಾಬ್ ವಿಚಾರದಲ್ಲಿ ನಮ್ಮ ಆತಿಥ್ಯ ಅತಿರೇಕವಾದರೆ ಆಪತ್ತಿಗೆ ದಾರಿಯಾಗಲಿದೆ. ಮಾಧ್ಯಮಕ್ಕೆ, ಸಂಘಪರಿವಾರದ ಐಟಿ ಪಡೆಗೆ ಆಹಾರವಾಗಲಿದೆ. ಅರೆಕ್ಷಣದ ಆವೇಶ ನಮ್ಮ ಅನೇಕ ಯುವಕರನ್ನು ಪರಿಸರ ಪ್ರಜ್ಞೆ ತಪ್ಪುವಂತೆ ಮಾಡುತ್ತದೆ. ಅಪದ್ಧ ಘೋಷಣೆ, ಜೈಕಾರಗಳಿಂದ ಸಾರ್ವಜನಿಕರಿಗೆ ತೊಂದರೆಯೇ ಹೆಚ್ಚು. ಶಿಹಾಬ್ ಆಗಮನದ ವೇಳೆ ಹಾಗೊಂಥರ ಅತಿರೇಕ ಸಂಭವಿಸಿ, ಮಾಧ್ಯಮಗಳ ಹಾಗೂ ಸೋಶಿಯಲ್ ಮೀಡಿಯಾದ ಪುಂಡರ ಬಾಯಿಗೆ ಆಹಾರವಾದರೆ ಆ ಯುವಕನ ನಿಯ್ಯತ್ತು, ನಿಷ್ಟೆಗೆ ನಾವು ದ್ರೋಹ ಬಗೆದಂತಾಗುತ್ತೇವೆ. ಆತನ ಮುಂದಿನ ದಾರಿಯ ಮುಳ್ಳಾಗಿ, ಮುಳುವಾಗುತ್ತೇವೆ. ಆದ್ದರಿಂದ ಕನಿಷ್ಠ ಸಾರ್ವಜನಿಕ ಸ್ವಾಸ್ಥ್ಯ ಹಾಳಾಗದಂತೆ, ರಸ್ತೆ ಅಡಚಣೆಯಾಗದಂತೆ, ಮಾಧ್ಯಮಗಳ ಕಣ್ಣಿಗೆ ಹುಳುಕು ಹುಡಕಲು ಅತಿರೇಕ ಸಂಭವಿಸದಂತೆ ತಮ್ಮನ್ನು ನಿಯಂತ್ರಿಸಿಕೊಳ್ಳುವಷ್ಟು ಪ್ರಾಪ್ತಿ, ಪರಿಸರ ಪ್ರಜ್ಞೆ ಇರುವವರಿಗೆ ಮಾತ್ರ ಶಿಹಾಬ್‌ರನ್ನು ಸ್ವಾಗತಿಸುವ ಅರ್ಹತೆಯಿದೆ.


  ~ಟಿ.ಎಂ ಸ‌ಅದಿ ತಂಬಿನಮಕ್ಕಿ

ರಂಜಾನ್ ಪಾವನ ಮಾಸ

ರಂಜಾನ್ ಪಾವನ ಮಾಸ ನಮ್ಮಲ್ಲಿರುವ ಕೆಲವು ಕೆಟ್ಟ ಆಹಾರ ಪದ್ಧತಿಗಳನ್ನು ತೊಡೆದುಹಾಕಲು,ಹಾಗೂ ಜೊತೆಗೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಒಂದು ಅವಕಾಶವಾಗಿದೆ, ...