MUSTHAFA HASAN ALQADRI OFFICIAL : ಕುಂಬಳಕಾಯಿ ಕಳ್ಳನೆಂದಾಗ ಹೆಗಲು ಮುಟ್ಟಿ ನೋಡಬೇಡಿ-Don't look over the shoulder when a pumpkin is stolen

Translate

Tuesday, July 21, 2020

ಕುಂಬಳಕಾಯಿ ಕಳ್ಳನೆಂದಾಗ ಹೆಗಲು ಮುಟ್ಟಿ ನೋಡಬೇಡಿ-Don't look over the shoulder when a pumpkin is stolen

ಕುಂಬಳಕಾಯಿ ಕಳ್ಳನೆಂದಾಗ ಹೆಗಲು ಮುಟ್ಟಿ ನೋಡಬೇಡಿ 
*************
✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ 
*************

ಮೊನ್ನೆ ಒಂದು ಬರಹವನ್ನು ಕಾಣಲು ಸಾಧ್ಯವಾಯ್ತು.ಅದರಲ್ಲಿ ನಾನು ಹಿಂದೆ ಬರೆದ ಬರಹಗಳನ್ನು ಪರಾಮರ್ಶಿಸಿರುವುದು ನೋಡಿ ಬಹಳ ಸಂತೋಷವಾಯಿತು.
ಒಂದನೆಯದಾಗಿ 
ಇದು ಈ ದೇಶದ ಪರಮೋನ್ನತ ಸಂವಿಧಾನ ನೀಡಿದ ವ್ಯಕ್ತಿ ಸ್ವಾತಂತ್ರ್ಯ.
ಒಬ್ಬ ವ್ಯಕ್ತಿ ತಾನು ನಂಬಿದ ಆಶಯವನ್ನು ಹಾಗೂ 
ಆಚಾರ ವಿಚಾರಗಳನ್ನು ಮುಕ್ತವಾಗಿ ಹಾಗೂ ಮಾನ್ಯವಾಗಿ ಸಂವಿಧಾನಕ್ಕೆ ಅನುಗುಣವಾಗಿ ವ್ಯಕ್ತಪಡಿಸುವ ಸ್ವಾತಂತ್ರವಾಗಿರುತ್ತದೆ. ಇದನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ.

ಒಂದು ವಿಚಾರದಲ್ಲಿ ಒಬ್ಬರು ಒಂದು ಅಭಿಪ್ರಾಯ ಅಥವಾ ತನ್ನ ಆಶಯ ವ್ಯಕ್ತಪಡಿಸಿದರೆ ಅದರಲ್ಲಿ ತನಗೆ ವಿರುದ್ಧ ಅಭಿಪ್ರಾಯವಿದ್ದಲ್ಲಿ ಅದನ್ನು ಮಾನ್ಯವಾಗಿ ಪ್ರಕಟಿಸಬೇಕು.
ಅದು ಮಾನ್ಯತೆ.
ಅದು ಬಿಟ್ಟು ನನ್ನ ಮತ್ತು ನನ್ನ ಸಂಘಟನೆಯ ಅನಿಸಿಕೆ ಅಭಿಪ್ರಾಯಗಳನ್ನು ಯಾರೂ ಪ್ರಶ್ನಿಸಬಾರದು.ನಾವು ಮಾಡಿದ್ದೇ ಸರಿ.ನಾವು ಹೇಳಿದ್ದೇ ಪರಮ ಸತ್ಯ ಎಂಬ ನಿಲುವು ಮಾತ್ರ ಒಪ್ಪಲಿಕ್ಕಾಗಲ್ಲ.ಅದು ತುಘಲಕ್ ಮತ್ತು ಹಿಟ್ಲರ್ ಮನೋಭಾವವಾಗುತ್ತದೆ.
ಅದು ಇಲ್ಲಿ ನಡೆಯುವುದಿಲ್ಲ ಉಳಿಯುವುದೂ ಇಲ್ಲ.

ಎರಡನೆಯ ಸಂತೋಷ ಏನೆಂದರೆ ಈ ಪ್ರತಿಕ್ರಿಯೆಯ ಬರಹಗಳಿಂದ ನಮ್ಮ ಬರಹಗಳು ತಲುಪಬೇಕಾದ ಮರ್ಮಗಳಿಗೆ ತಲುಪುತ್ತಿದೆ ಎಂದು ನಮಗೆ ಖಾತ್ರಿಯಾಗುತ್ತಿದೆ. ನಮ್ಮ ಬರಹದ ಉದ್ದೇಶವೂ ಅದುವೇ ತಾನೇ.

ಆದರೆ ಪ್ರಸ್ತುತ ಬರಹದಲ್ಲಿ ಉದ್ಭವಿಸಿದ ಕೆಲವು ಪ್ರಶ್ನೆಗಳಿಗೆ ಮುಂದಿನ ಬರಹದಲ್ಲಿ ಅವರು ಉತ್ತರಿಸುವರು ಎಂಬ ನಿರೀಕ್ಷೆಯೊಂದಿಗೆ ಕೇಳುತ್ತೇನೆ.

 
ನಾನು ನನ್ನ ಬರಹದಲ್ಲಿ ಎಲ್ಲಿಯೂ ಯಾವುದೇ 
ಒಂದು ಸಂಘಟನೆಯ 
ಹೆಸರು ಪ್ರಸ್ತಾಪಿಸಲೇ ಇಲ್ಲ.ಅದರ ಅಗತ್ಯವೂ ಇಲ್ಲ.ನಮ್ಮ ಚರ್ಚೆ ಏನಿದ್ದರೂ ವಿಷಯಾಧಾರಿತ ಮಾತ್ರವಾಗಿತ್ತು.
ಮಾತ್ರವಲ್ಲ ಕೋವಿಡ್ ಪೀಡಿತ ಮೃತ ಶರೀರಗಳ ಅಂತ್ಯಕ್ರಿಯೆ ಯಲ್ಲಿ ಭಾಗವಹಿಸುವ ಧೈರ್ಯ ತೋರಿದ ಮುಸ್ಲಿಮ್ 
ಸಂಘಟನೆ ಗಳನ್ನು ಅದೇ ಬರಹದಲ್ಲಿ ಮೊದಲು ಅಭಿನಂದಿಸಿ ಬರೆದಿದ್ದೇನೆ.
ಅಲ್ಲದೆ ನಮಗೆ ಯಾವುದೇ ಸಂಘಟನೆಯೊಂದಿಗೆ ಪೂರ್ವಾಗ್ರಹ ಪೀಡಿತ ವಿರೋಧವೇನೂ ಇಲ್ಲ.
ಯಾವುದೇ ಸಂಘಟನೆ ನೈಜ ಇಸ್ಲಾಮಿನ ತತ್ವಸಿದ್ಧಾಂತಗಳಿಗೆ ಅನುಗುಣವಾಗಿದ್ದು ಸಮಾಜಕ್ಕೂ ದೀನಿಗೂ ದೇಶಕ್ಕೂ ಒಳಿತಾಗಿದ್ದಲ್ಲಿ ಅಲ್ಲಾಹು ಉನ್ನತಿಗೇರಿಸಲಿ.
ಒಂದು ವೇಳೆ ಮಾರಕವಾಗಿದ್ದಲ್ಲಿ ಅಲ್ಲಾಹು ಪರಾಭವಗೊಳಿಸಲಿ.
ಇದು ನಾವು ಹಿಂದಿನಿಂದಲೂ ತಾಳಿದ ನಿಲುವು ಹಾಗೂ ನಮ್ಮ ದುಆ.

(ಅಲ್ಲಾಹನಲ್ಲಿ ಹೀಗೆ ದುಆ ಮಾಡ ಬಾರದು ಎಂಬ ಅಭಿಪ್ರಾಯ ಈ ಬರಹಗಾರನಿಗೆ ಇದ್ದಲ್ಲಿ ಮುಂದಿನ ಉತ್ತರದಲ್ಲಿ ತಿಳಿಸಬಹುದು)

ಹೀಗಿರುವಾಗ ಸುಖಾಸುಮ್ಮನೆ ಸಂಘಟನೆಗಳ ಹೆಸರು ಎಳೆದು ತಂದು ಸಮಾಜ ಒಗ್ಗಟ್ಟು ಪ್ರದರ್ಶಿಸಬೇಕಾದ ಈ ಸಂದಿಗ್ಧ ಹಾಗೂ ಸಂಕೀರ್ಣ ಸಮಯದಲ್ಲಿ ಸಂಘಟನೆಗಳನ್ನು ಪರಸ್ಪರ ಎತ್ತಿಕಟ್ಟಿ ಕಚ್ಚಾಡಿಸಿ ಆನಂದ ಪಡುವ ಇಂತಹ ವಿಕೃತ ಮನಸ್ಸಿನ ಉದ್ದೇಶವಾದರೂ ಏನಿರ ಬಹುದು?

ಇನ್ನೊಂದು ವಿಷಯವೇನೆಂದರೆ ಪ್ರಸ್ತುತ ಬರಹದುದ್ದಕ್ಕೂ ತಲ್ಕೀನ್,ಜಾಮ ಖತ,ದುಆ ಮುಂತಾದ ಸುನ್ನೀ ಆಚಾರವಿಚಾರಗಳ ಬಗ್ಗೆ ಒಂದು ತರ ಕೀಳಾಗಿ ಬರೆದಿರುವುದು ಕಾಣುತ್ತದೆ.ಇದರಿಂದ ನಮಗೆ ಇಲ್ಲಿ ಹುಟ್ಟುವ ಬಲವಾದ ಅನುಮಾನವೇನೆಂದರೆ ಈ ಬರಹಗಾರ ಯಾವುದೋ ನೂತನವಾದಿ ಆಗಿದ್ದು 
ಸುನ್ನೀ ಆಶಯಗಳನ್ನು ನಾಶಪಡಿಸಲು ಸಂಘಟನೆಯ ಮುಖವಾಡದೊಂದಿಗೆ ಬಂದಿರುವುದಾಗಿರ ಬಹುದೋ?
ಒಂದು ವೇಳೆ ಹಾಗೇನಾದರೂ ಸುನ್ನತ್ ಜಮಾಅತಿನ ಆಶಯಗಳನ್ನು ನಾಶಪಡಿಸುವ ಉದ್ದೇಶದಿಂದ ಸಂಘಟನೆಯ ಮುಖವಾಡದೊಂದಿಗೆ ಬಂದಿರುವುದಾದರೆ ಅದನ್ನು ಮನಸ್ಸಿಲ್ಲೇ ಇಟ್ಟು ಕೊಳ್ಳುವುದೊಳ್ಳೆಯದು.
ಯಾಕೆಂದರೆ ಅದು ಇಲ್ಲಿ ನಡೆಯುವ ಕಾರ್ಯವಲ್ಲ.
ಈ ಹಿಂದೆ ಅನೇಕರು ಅನೇಕ ಮುಖವಾಡಗಳೊಂದಿಗೆ ಬಂದು ಈ ಸುನ್ನೀ ಆಶಯವನ್ನು ನಾಶಪಡಿಸುವ ಪ್ರಯತ್ನಕ್ಕೆ ಕೈಹಾಕಿ ಅವರೇ ನಾಮಾವಶೇಷ ಗೊಂಡಿದ್ದಾರೆಯೇ ಹೊರತು ಸುನ್ನೀ ಆಶಯವನ್ನು ಯಾರಿಂದಲೂ 
ಏನೂ ಮಾಡಲು ಸಾಧ್ಯವಾಗಿಲ್ಲ.
ಸಾದ್ಯವಾಗುವುದೂ ಇಲ್ಲ. ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದೊಳಿತು.


"لَا يَزَالُ مِنْ أُمَّتِي أُمَّةٌ قَائِمَةٌ بِأَمْرِ اللَّهِ لَا يَضُرُّهُمْ مَنْ خَذَلَهُمْ وَلَا مَنْ خَالَفَهُمْ حَتَّى يَأْتِيَهُمْ أَمْرُ اللَّهِ وَهُمْ عَلَى ذَلِكَ

ಎಲ್ಲಾ ವಿರೋಧ ಪ್ರತಿರೋಧಗಳನ್ನು ಹಿಮ್ಮೆಟ್ಟಿಸಿ ಸತ್ಯಪಥದಲ್ಲಿ ನೆಲೆನಿಂತಿರುವ ಒಂದು ವಿಭಾಗವು ಅಂತ್ಯದಿನದ ತನಕ ಈ ಭೂಮಿಯಲ್ಲಿದ್ದೇ ಇರುತ್ತದೆಂದು ನೆಬಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹದಿನಾಲ್ಕು ಶತಮಾನಗಳ ಹಿಂದೆಯೇ ಘಂಟಾಘೋಷವಾಗಿ ಹೇಳಿರುತ್ತಾರೆ. ಅದನ್ನು ಸುಳ್ಳಾಗಿಸಲು ಯಾರಿಂದಲೂ ಸಾಧ್ಯವಿಲ್ಲ ತಾನೇ.
ಆದ್ದರಿಂದ ಈ ಬರಹಗಾರನ  ಮನಸ್ಸಿನ ಆಡೀಯಲ್ಲಿ ಏನಾದರೂ ಇಂತಹ  ಒಂದು ಸಣ್ಣ ಭಾವನೆ ಇದ್ದರೆ ಅದನ್ನು ಈಗಲೇ ಬಿಟ್ಟು ಬಿಡುವುದೊಳ್ಳೆಯದು.
ಅದು ನಡೆಯದ ನಾಣ್ಯವೆಂಬುದರಲ್ಲಿ ಸಂಶಯವೇ ಇಲ್ಲ.

ಮತ್ತೆ ಕೈ ಮಡಕ್ ಬಗ್ಗೆ ಬಹಳ ಗೇಳಿ ಮಾಡಿ ಬರೆದಿರುವುದು ಕಾಣುತ್ತದೆ. 
ಹೌದು ಅದು ಉಸ್ತಾದ್ ಗಳಿಗೆ ಅದರಷ್ಟು ಸಂತೃಪ್ತಿಯಿರುವ ವಸ್ತು ಬೇರೆ ಇಲ್ಲವೇ ಇಲ್ಲ.
ಕಾರಣವೇನೆಂದರೆ ಕೈ ಮಡಕ್ ಎಂಬುದು ಸಂತೋಷದಿಂದ ಸತ್ಯವಿಶ್ವಾಸಿಗಳು ನೀಡುವ ಒಂದು ಹದಿಯಯಾಗಿರುತ್ತದೆ. ಅದರಷ್ಟು ಹಲಾಲಾದ ಸಂಪತ್ತು ಬೇರೊಂದಿರಲಿಕ್ಕೆ ಸಾಧ್ಯವಿಲ್ಲ.
ಉಲಮಾಗಳನ್ನು ಸೃಷ್ಟಿ ಮಾಡುವುದು ಹಾಗೂ ಅವರಿಗೆ ಬೇರೆ ಬೇರೆ ರೀತಿಯಲ್ಲಿ ತಮ್ಮ ಸಂಪತ್ತಿನ ಒಂದು ಪಾಲನ್ನು ನೀಡಿ ಮರಣದ ವರೆಗೂ ಅವರನ್ನು ನೋಡಿ ಕೊಳ್ಳುವುದು ಈ ಸಮುದಾಯದ ಉತ್ತಮ ಮನಸ್ಸುಗಳಾಗಿದೆ.
ಅದರಲ್ಲಿ ಯಾರೂ ಯಾವುದೇ ಅಸೂಯೆ ಪಟ್ಟು ಪ್ರಯೋಜನವಿಲ್ಲ.

ಅಲ್ಲದೆ ಮನೆಮನೆಗೆ ಹೋಗಿ ಜನರನ್ನು ಮಂಕು ಮರಳು ಮಾಡಿ ಝಕಾತ್ ಹಣವನ್ನು ಲಪಟಾಯಿಸುವುದೊ ಅಥವಾ ಮಸೀದಿ ಮದ್ರಸಗಳ ಬಾಗಿಲಲ್ಲಿ ನಿಂತು ಬ್ಯಾನರ್ ಹಿಡಿದು ಹಣ ಸಂಗ್ರಹಿಸಿ ಅದರ ಲೆಕ್ಕವನ್ನು ಸಂಘಟನೆಗೂ ಕೊಡದೆ ಶುದ್ದ ಹರಾಮನ್ನು ನುಂಗಣ್ಣರಾಗಲು ಉಸ್ತಾದರಿಗೆ ಸಾಧ್ಯವಿಲ್ಲ ತಾನೇ.

ಇಂತಹ ಕಾಲದಲ್ಲಿ ಉಸ್ತಾದರಿಗೆ ಸಮುದಾಯದ ಜನರು ಶುದ್ಧವಾದ ಹಲಾಲ್ ಕೈಮಡಕ್ ಹದಿಯಗಳನ್ನು ನೀಡುವುದನ್ನು ಸಹಿಸಲು ಬೇಕಾದ ವಿಶಾಲ ಮನಸ್ಸು ಇಂತಹ ವ್ಯಕ್ತಿಗಳಿಗೆ ಇಲ್ಲದೇ ಹೋದಲ್ಲಿ ಅದು ಸಮುದಾಯದ ತಪ್ಪಲ್ಲ.ಅದು ಆ ವ್ಯಕ್ತಿಗಳ ಬಲಹೀನತೆ ತಾನೇ.

ಮಾತ್ರವಲ್ಲ ಒಂದು ಸೂರತ್ ಫಾತಿಹ ಓದಿ ಮಂತ್ರಿಸಿದ್ದಕ್ಕೆ ಆಡುಗಳ ಸಮೂಹವನ್ನೇ ಹದಿಯಯಾಗಿ ನೀಡಿದ್ದು ಸಹಾಬಿಗಳು ಆ ಹದಿಯವನ್ನು ಸ್ವೀಕರಿಸಿದ್ದು ರಸೂಲುಲ್ಲಾಹಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಅದಕ್ಕೆ ಸಂತೋಷದಿಂದ ಒಪ್ಪಿಗೆ ಸೂಚಿಸಿದ್ದು ಇದೆಲ್ಲಾ ಸಹೀಹಾದ ಹದೀಸಿನಲ್ಲಿರುವುದನ್ನು ಈಗ ವಿವರಿಸಲು ಬಯಸುವುದಿಲ್ಲ.ಬೇಕಾದಾಗ ವಿವರಿಸುವ.ಇನ್ಷಾ ಅಲ್ಲಾಹ್.

ಇನ್ನು ಈ ತಲ್ಕೀನ್,ಜಾಮ ಖತಂ,ದುಆ ಹಾಗೂ ಕೈಮಡಕ್ ಗಳನ್ನು ಗೇಲಿ ಮಾಡಿರುವುದು ಈ ವ್ಯಕ್ತಿಯ ವೈಯಕ್ತಿಕ ಅಭಿಪ್ರಾಯಗಳೇ ಅಥವಾ ಇವರಿಗೆ ಸಂಬಂಧ ಪಟ್ಟ ಸಂಘಟನೆಗೂ ಇದೇ ಅಭಿಪ್ರಾಯವೇ ಎಂಬುದನ್ನು ಸಂಘಟನೆಯ ಮುಖಂಡರು ಸ್ಪಷ್ಟಪಡಿಸುವುದು ಒಳ್ಳೆಯದು.
ಇಲ್ಲದಿದ್ದಲ್ಲಿ ತಪ್ಪು ಭಾವನೆ ಹುಟ್ಟುವ ಸಾಧ್ಯತೆ ಇದೆ.

ಇನ್ನು ಮೃತ ಶರೀಗಳ ಅಂತ್ಯಸಂಸ್ಕಾರದ ವಿಷಯಕ್ಕೆ ಬರುವುದಾದರೆ ಇಸ್ಲಾಮಿನಲ್ಲಿ ಒಂದು ಮಯ್ಯಿತಿನ ದಫನದಲ್ಲಿ ಪಾಲಿಸಬೇಕಾದ ಕಡ್ಡಾಯ ಕಾರ್ಯಗಳಿವೆ.
ಸುನ್ನತ್ತಾದ ಕಾರ್ಯಗಳಿವೆ.ಜಾಇಝ್ ಆದ ಕಾರ್ಯಗಳಿವೆ. ಸುನ್ನತ್ ಮತ್ತು ಜಾಇಝ್ ಗಳನ್ನು ಒಂದು ವೇಳೆ ಅನಿವಾರ್ಯತೆಗೆ ಬಿಡಬೇಕಾಗಿ ಬರಬಹುದು ಎಂದು ಇಟ್ಟು ಕೊಳ್ಳೋಣ.
ಕಡ್ಡಾಯವಾದ ಕಾರ್ಯಗಳಲ್ಲಿ ಕೆಲವು ಅತ್ಯಂತ ಕಟ್ಟು ನಿಟ್ಟಾಗಿ ಪಾಲಿಸಬೇಕಾದುದಿದೆ. ಉದಾಹರಣೆಗೆ ಮೃತ ಶರೀರವನ್ನು ಖಬ್ರಿನ ಒಳಗೆ ಖಿಬ್ಲಾಕ್ಕೆ ನೇರ ಮುಖ ಮಾಡಿ ಸರಿಯಾಗಿ ಮಲಗಿಸ ಬೇಕೆಂದಾಗಿದೆ.
ಎಷ್ಟರ ವರೆಗೆಂದರೆ ಒಂದು ವೇಳೆ ಎಲ್ಲಿಯಾದರೂ ದಫನವೆಲ್ಲಾ ಮುಗಿದ ಮೇಲೆ ಮೃತ ಶರೀರವನ್ನು ಮಲಗಿಸಿದ್ದು ಸರಿಯಾಗಿಲ್ಲ ಎಂದು ತಿಳಿದು ಬಂದರೆ ಪುನಃ ಖಬ್ರನ್ನು ಅಗೆದು ಮಯ್ಯಿತನ್ನು ಸರಿಯಾಗಿ ಖಿಬ್ಲಾಕ್ಕೆ ಮುಖ ಮಾಡಿಸಿ ಮಲಗಿಸ ಬೇಕೆಂದಾಗಿದೆ ನಿಬಂಧನೆ. ಇಷ್ಟೆಲ್ಲಾ ನಿಬಂಧನೆಗಳು ಇರುವಾಗ ಈ ವ್ಯಕ್ತಿಗಳಂತವರ ಪ್ರಚಾರದ ಅತ್ಯಾಶೆಗೆ ಬೇಕಾಗಿ ದೀನಿನ ಈ ಗಂಭೀರ ನಿಯಮಗಳೆನ್ನೆಲ್ಲಾ ಗಾಳಿಗೆ ತೂರಿ ಅತ್ಯಂತ ಗೌರವಯುತವಾಗಿ ನಡೆಯಬೇಕಾದ ದಫನವನ್ನು ಅತ್ಯಂತ ಮೃಗೀಯವಾಗಿ ನಡೆಸುವುದನ್ನು ಕಂಡೂ ಕಾಣದಂತೆ ನಟಿಸಿ ಮೌನವಹಿಸ ಬೇಕೆಂದಾದರೆ ಇದನ್ನು ಯಾರಿಗೆ ಒಪ್ಪಲು ಸಾಧ್ಯ? 
ಈ ಮಯ್ಯಿತಿನೊಂದಿಗೆ ತೋರುವ ಈ ಅನ್ಯಾಯದ ವಿರುದ್ಧ ಮಾತಾಡುವುದು  ಇಂತವರ ಭಾಷೆಯಲ್ಲಿ ಫಿತ್ನ ಎಂದಾದರೆ ಆ ಫಿತ್ನವನ್ನು ಸಾವಿರ ಸಾವಿರ ಸಲ ಆವರ್ತಿಸಲು ನಾವು ಸಿದ್ಧರೆಂದು ಇಲ್ಲಿ ಸ್ಪಷ್ಟಪಡಿಸಬೇಕಾಗುತ್ತದೆ.

ಇನ್ನು ಫಿತ್ನ,ಮುನಾಫಿಖ್ ಪದಗಳ ಅರ್ಥಗಳನ್ನು ಸರಿಯಾಗಿ ತಿಳಿಯದಿದ್ದಲ್ಲಿ ತಿಳಿದವರಲ್ಲಿ ಕೇಳಿ ತಿಳಿದು ಕೊಳ್ಳುವುದೊಳಿತು.ಇಲ್ಲದಿದ್ದರೆ ತಾನರಿಯದೇ ತನಗೇ ತಿರುಗು ಬಾಣವಾಗಿ ಪರಿಣಮಿಸಿ ಅಪಾಯಕ್ಕೆ ಸಿಲುಕುವುದು ಖಂಡಿತ.
✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ 

No comments:

ರಂಜಾನ್ ಪಾವನ ಮಾಸ

ರಂಜಾನ್ ಪಾವನ ಮಾಸ ನಮ್ಮಲ್ಲಿರುವ ಕೆಲವು ಕೆಟ್ಟ ಆಹಾರ ಪದ್ಧತಿಗಳನ್ನು ತೊಡೆದುಹಾಕಲು,ಹಾಗೂ ಜೊತೆಗೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಒಂದು ಅವಕಾಶವಾಗಿದೆ, ...