Translate

Thursday, July 23, 2020

ಮಹಾಮಾರಿ ಬಂದಿದ್ದರಲ್ಲಿ ಅಲ್ಲ ಬಾರದೇ ಇದ್ದರೆ ಅದ್ಭುತ

ಮಹಾಮಾರಿ ಬಂದಿದ್ದರಲ್ಲಿ ಅಲ್ಲ ಬಾರದೇ ಇದ್ದರೆ ಅದ್ಭುತ 
************
✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ 
************
ಮೊನ್ನೆ ಒಬ್ಬ ಒಂದು ಬೆಕ್ಕನ್ನು ಹಿಂಸಿಸುವ ದೃಶ್ಯ ವೈರಲಾಯ್ತು.ಆ ದೃಶ್ಯ ಹೇಗಿತ್ತೆಂದರೆ ಹೃದಯದಲ್ಲಿ ಒಂದು ಅಣು ವಿನಷ್ಟಾದರೂ ಕರುಣೆಯಿರುವ ಮನಸ್ಸಿಗೆ ಆ ದೃಶ್ಯವನ್ನು ನೋಡಿ ಮುಗಿಸಲು ಕೂಡಾ ಸಾಧ್ಯವಾಗದು.ಅದು ಅಷ್ಟೊಂದು ವಿಕೃತ ರೀತಿಯಲ್ಲಾಗಿತ್ತು.
ಇನ್ನು ನೋಡಿದವರಿಗೂ ಆ ಬೆಕ್ಕಿನ ನರಳಾಟ ನೋಡಿ ಕಣ್ಣೀರಿಡದಿರಲು ಸಾಧ್ಯವಿಲ್ಲ
ಮತ್ತೊಂದು ಕಡೆ ಒಂದು ಮನೆಯಲ್ಲಿ ಹಿರಿಯ ವಯಸ್ಸಿನ ಒಂದು ಅಜ್ಜಿಯನ್ನು ಸ್ವಂತ ಮಗ ಮತ್ತು ಮೊಮ್ಮಗ ಸೇರಿ ಅತಿ ಕ್ರೂರವಾಗಿ ಹಿಂಸಿಸುತ್ತಿರುವ ದೃಶ್ಯವೂ ವೈರಲಾಯ್ತು.
ತಮಿಳುನಾಡಿನಲ್ಲಿ ಪೋಲೀಸರಿಂದ ಅತಿಕ್ರೂರವಾಗಿ ಹಿಂಸೆಗೊಳಗಾಗಿ ಮೃತಪಟ್ಟ ಎರಡು ಜೀವಗಳ ದೃಶ್ಯ.
ಅದೇ ರೀತಿ ಲಾಕ್ ಡೌನ್ ಸಮಯದಲ್ಲಿ ಕೆಲವು ಕಡೆ ಪೋಲೀಸರು ತೋರಿದ ಹಿಂಸೆಯ ರುದ್ರಾವತಾರ.
ಅದೇ ರೀತಿ ಕೋಮುವಾದ,ಭಯೋತ್ಪಾದನೆ,ರಾಜಕೀಯ ವೈರಾಗ್ಯಗಳ ಅಮಲಿನಲ್ಲಿ ನಡೆಯುವ ಅತಿಕ್ರೂರವಾದ ಹಿಂಸೆಯ ಬೇರೆ ಬೇರೆ ದೃಶ್ಯಾವಳಿಗಳು.

ಇದೆಲ್ಲವನ್ನು ವೀಕ್ಷಿಸುವಾಗ ಇಲ್ಲಿ ಮಾಹಾಮಾರಿಯಂತಹ ಪಿಡುಗು ಬರದೇ ಇದ್ದರೆ ಅದ್ಬುತವೆಂದು ಎನಿಸದಿರದು.
ಈ ಸಂದರ್ಭದಲ್ಲಿ ನೆನಪಿಗೆ ಬರುವುದು ಕಾರುಣ್ಯದ ಸಮುದ್ರವಾದ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದ ಹದೀಸಾಗಿದೆ.

الراحمون يرحمهم الرحمن ارحموا من في الأرض يرحمكم من في السماء
ಪರಸ್ಪರ ಕರುಣೆಯಿರುವವರಿಗೆ ಕರುಣಾನಿಧಿಯಾದ ಅಲ್ಲಾಹು ಕರುಣೆ ನೀಡುವವನು.ಭೂಮಿಯಲ್ಲಿರುವವರಿಗೆ ಕರುಣೆ ನೀಡಿರಿ.ಆಕಾಶದ ಅಧಿಪತಿಯಾದ ಅಲ್ಲಾಹು ನಿಮಗೆ ಕರುಣೆ ನೀಡುವನು.ಅಂದರೆ ಅಲ್ಲಾಹನ ಕರುಣೆ ಈ ಭೂಮಿಗೆ ವರ್ಷಿಸುತ್ತಿರ ಬೇಕಾದರೆ ಭೂಮಿಯಲ್ಲಿರುವವರು ಪರಸ್ಪರ ಕರುಣಾಮಯಿಗಳಾಗ ಬೇಕು ಎಂದಾಗಿದೆ 
ಇವತ್ತಿನ ಕೆಲವು ಘಟನೆಗಳನ್ನು ನೋಡುವಾಗ ಈ ಹದೀಸ್ ಬಹಳ ಪ್ರಸ್ತುತವೆನಿಸುತ್ತದೆ.
ಕರುಣೆಯಿರುವ ಮನುಷ್ಯ ಮನಸ್ಸುಗಳು ಪ್ರೀತಿಯಿಂದ ಮುದ್ದಿಸುವ ಹಾಗೂ ಹಸಿದಾಗ ಮಾತ್ರ ತನ್ನದೇ ಭಾಷೆಯಲ್ಲಿ ಸೂಚನೆ ನೀಡುವ ತನ್ನ ಸಾಕುಗಾರರೊಂದಿಗೆ ಅತ್ಯಂತ ವಿನಯದಿಂದ ವರ್ತಿಸುವ ಎಲ್ಲರ ಅಚ್ಚುಮೆಚ್ಚಿನ ನಿರುಪದ್ರವಿ ಪ್ರಾಣಿಯಾಗಿದೆ ಬೆಕ್ಕು.
ಇಂತಹ ಮೂಕ ಪ್ರಾಣಿಯನ್ನು ಅತ್ಯಂತ ನಿಷ್ಕರುಣೆಯಿಂದ ಹಿಂಸಿಸಿ ಅದರ ವೀಡಿಯೋ ವೈರಲ್ ಮಾಡಿ ಮಜಾ ಉಡಾಯಿಸುವ ಮನಸ್ಸು ಎಂತಹ ನಿಕೃಷ್ಟ ಮನಸ್ಸಾಗಿರ ಬಹುದು ಎಂಬುದೇ ಅರ್ಥವಾಗದ ವಿಚಾರ.
ಆ ಬೆಕ್ಕು ಆ ಸಮಯದಲ್ಲಿ ಎಷ್ಟೊಂದು ವೇದನೆ ಯಾತನೆ ಅನುಭವಿಸಿರ ಬಹುದು ಎಂದು ಊಹಿಸಲೂ ಸಾಧ್ಯವಾಗುವುದಿಲ್ಲ.

ಮನುಷ್ರ ಬಕ್ಷ್ಯಕ್ಕಾಗಿಯೇ ಸೃಷ್ಟಿಸಲ್ಪಟ್ಟ ಕೆಲವು ಬಕ್ಷ್ಯಯೋಗ್ಯ ಪ್ರಾಣಿ ಪಕ್ಷಿಗಳನ್ನು ಕೂಡಾ ಬಕ್ಷ್ಯಕ್ಕಾಗಿ ಉಪಯೋಗಿಸುವಾಗ ಅತ್ಯಂತ ಎಚ್ಚರಿಕೆಯಿಂದ ಧಬಹ್ ಮಾಡ ಬೇಕೆಂದಾಗಿದೆ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಕಲಿಸಿ ಕೊಟ್ಟಿರುವುದು.
ಮಾತ್ರವಲ್ಲ ಧಬಹ್ ಮಾಡುವಾಗ ಆ ಪ್ರಾಣಿಪಕ್ಷಿಗಳಿಗೆ ಯಾವುದೇ ನೋವು ಅನುಭವವಾಗದಿರಲು  ಅತ್ಯಂತ ಹರಿತವಾದ ಚಾಕುವಿನಿಂದ ಅನ್ನ ಮತ್ತು ಶ್ವಾಸ ನಾಳಗಳನ್ನು ತಕ್ಷಣ ಕತ್ತರಿಸಬೇಕು.ಯಾಕೆಂದರೆ ಈ ಎರಡು ನಾಳಗಳು ಕತ್ತರಿಸಲ್ಪಡುವುದರೊಂದಿಗೆ ಅದರ ಮೆದುಳಿನ ಸಂಪರ್ಕ ಕಡಿತಗೊಳ್ಳುತ್ತದೆ. 
ನಂತರ ಆ ಪ್ರಾಣಿಗೆ ಯಾವುದೇ ನೋವಿನ ಅನುಭವವಾಗುವುದಿಲ್ಲ.
ಇದು ಯಾವುದೇ ಹಿಂಸೆಯಾಗದಂತೆ ಧಬಹ್ ಮಾಡುವ ರೀತಿಯಾಗಿದೆ.

ಆದರೆ ಇದಕ್ಕೆ ವಿರುದ್ಧವಾಗಿ ಪ್ರಾಣಿಪಕ್ಷಿಗಳೊಂದಿಗೆ ಕರುಣೆಯಿಲ್ಲದ ರೀತಿಯಲ್ಲಿ ಕಂಡು ಬರುವ ಯಾವುದೇ ಧಬಹ್ ಗಳು ಅದು ಯಾರೇ ನಡೆಸಲಿ ಇಸ್ಲಾಮ್ ಕಲಿಸಿ ಕೊಟ್ಟಿದ್ದಲ್ಲ.
ಅದಕ್ಕೂ ಇಸ್ಲಾಮಿಗೂ ಯಾವುದೇ ಸಂಬಂಧವಿಲ್ಲ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
ಇಸ್ಲಾಮ್ ಯಾವುದೇ ಪ್ರಾಣಿಪಕ್ಷಿ ಗಳೊಂದಿಗೂ ಯಾವುದೇ ರೀತಿಯ ಹಿಂಸೆಯನ್ನು ಸಹಿಸುವುದೇ ಇಲ್ಲ.
ಆದ್ದರಿಂದಲೇ ಪ್ರಾಣಿಪಕ್ಷಿಗಳಿಗೆ ಹಿಂಸೆಗೆ ಕಾರಣವಾಗುವ ಕಂಬಳ,ಕೋಳಿ ಅಂಕದಂತಹ ಕಾರ್ಯಗಳನ್ನು ಇಸ್ಲಾಮ್ ವಿರೋಧಿಸಿರುವುದು.

عبد الله بن مسعود رضي الله عنه  قال كنا مع النبى صلى الله عليه وسلم فى سفر فانطلق لحاجته، فرأينا حُمَّرةً  معها فرخان، فأخذنا فرخيها، فجاءت الحمرة فجعلت تفرش من الأرض، فجاء النبي ـ صلى الله عليه وسلم ـ فقال: من فجع هذه بولدها؟، ردوا ولدها إليها  رواه أبو داود

ಅಬ್ದುಲ್ಲಾಹಿಬ್ನ್ ಮಸ್ಊದ್ ರಳಿಯಲ್ಲಾಹು ಅನ್ಹುರವರು ಹೇಳುತ್ತಾರೆ:- ನಾವು ನೆಬಿ ಸಲ್ಲಲ್ಲಾಹು ಅಲೈಹಿವಸಲ್ಲಮರೊಂದಿಗೆ ಒಂದು ಯಾತ್ರೆ ಹೋಗುತ್ತಾ ಇದ್ದೆವು.ದಾರಿ ಮದ್ಯೆ ನೆಬಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ತನ್ನ ಅಗತ್ಯ ನಿರ್ವಹಣೆಗೆ ಹೋಗಿದ್ದರು.
ನಾವು ಒಂದು ಸಣ್ಣ ಪಕ್ಷಿ ಮತ್ತು ಅದರ ಎರಡು ಮರಿಗಳನ್ನು ಕಂಡೆವು.ಆ ಪಕ್ಷಿಯ ಎರಡು ಮರಿಗಳನ್ನು ಹಿಡಿದು ತಂದೆವು.ಇದನ್ನರಿತ ತಾಯಿಪಕ್ಷಿಯು ಬಂದು ಆ ಮರಿಗಳೊಂದಿಗಿನ ಪ್ರೀತಿಯಿಂದ ನಮ್ಮೊಂದಿಗೆ ಅತ್ಯಂತ ವಿನಯ ಪ್ರಕಟಿಸುತ್ತಿತ್ತು.
ಆಗ ಅಲ್ಲಿಗೆ ದಾವಿಸಿ ಬಂದ ನೆಬಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಇದನ್ನು ಕಂಡಾಗ ಕೇಳಿದರು. ಯಾರು ಈ ಪಕ್ಷಿ ಮತ್ತು ಅದರ ಮರಿಗಳನ್ನು ಬೇರ್ಪಡಿಸಿದ್ದು ತಕ್ಷಣ ಹಿಂತಿರುಗಿಸಿ ಎಂದು ಆಜ್ಞಾಪಿಸಿದರು.

ಈ ರೀತಿ ಮನುಷ್ಯರು ಮಾತ್ರವಲ್ಲ ಯಾವುದೇ ಪ್ರಾಣಿಪಕ್ಷಿಗಳೊಂದಿಗೆ ಕರುಣೆಗೆ ವಿರುದ್ಧವಾದ ಯಾವುದೇ ವರ್ತನೆಯನ್ನು ಇಷ್ಟಪಡುತ್ತಿರಲಿಲ್ಲ.

ಒಂದು ತಾಯಿ ಒಂಬತ್ತು ತಿಂಗಳು ಹೊಟ್ಟೆಯಲ್ಲಿ ಹೊತ್ತು ಎಲ್ಲಾ ನೋವು ನಲಿವುಗಳನ್ನು ಸಮನಾಗಿ ಸಹಿಸಿ ಅವಳು ಅತ್ಯಂತ ಸಂತೋಷಪಡುವ ಸಮಯ ಒಂದು ಮಗುವಿಗೆ ಜನ್ಮ ನೀಡಿದ ಸಮಯದಲ್ಲಾಗಿದೆ.ಆ ಮಗುವಿನ ಮುಖ ದರ್ಶನದೊಂದಿಗೆ ಇದು ವರೆಗೆ ತಾನು ಸಹಿಸಿದ ಎಲ್ಲಾ ನೋವು ನಲಿವುಗಳನ್ನು ಆ ಕರುಣಾಮಯಿ ಮಹಾತಾಯಿ ತಕ್ಷಣ ಮರೆತು ಬಿಡುತ್ತಾಳೆ.

ಇದೇ ತಾಯಿ ಇದೇ ರೀತಿಯ ಇನ್ನೊಂದು ಸಂತೋಷ ಪಡುವ ಸಮಯವಿದೆ.ಅದು ಯಾವುದೆಂದರೆ ಇದೇ ಮಗು ದೊಡ್ಡವನಾಗಿ ಮದುವೆಯಾಗಿ ಅವನಿಗೊಂದು ಮಗು ಹುಟ್ಟುವಾಗಲೂ ಈ ಮಹಾತಾಯಿ ತನ್ನ ಹಿಂದಿನ ಸಂತೋಷಕ್ಕೆ ಸಮಾನವಾದ ಸಂತೋಷ ಗೊಳ್ಳುತ್ತಾಳೆ.ಅಂದು ಮಗುವಾದ ಸಂತೋಷವಾದರೆ ಇಂದು ಮೊಮ್ಮಗನಾದ ಸಂತೋಷವಾಗಿದೆ.ಅಂದರೆ ತಾಯಿಯ ಕರುಣೆಗೆ ಸಮಾನವಾಗಿ ತಾಯಿ ಮಾತ್ರ.
ಇದರಿಂದಾಗಿಯೇ

الجنة تحت اقدام الامهات

ಸ್ವರ್ಗವು ತಾಯಂದಿರ ಕಾಲಿನಡಿಯಲ್ಲಾಗಿದೆ ಎಂದು ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿರುವುದು.

ಇವತ್ತು ಅದೇ ತಾಯಿ ವಯಸ್ಸಾಗಿ ತನ್ನೆಲ್ಲಾ ಶಕ್ತಿಯನ್ನು ಕಳೆದು ಕೊಂಡು ಹಾಸಿಗೆ ಹಿಡಿದು ಮಕ್ಕಳು ಮೊಮ್ಮಕ್ಕಳಿಂದ ಆಸರೆಯನ್ನು ಬಯಸುವ ಈ ಸಮಯದಲ್ಲಿ ಮಗ ಮತ್ತು ಮೊಮ್ಮಗ ಒಟ್ಟು ಸೇರಿ ಸಮಾನವಾಗಿ ನಿಷ್ಠುರವಾಗಿ ಹಿಂಸಿಸುವುದನ್ನು ಈ ಭೂಮಿ ಸಹಿಸಲು ಸಾಧ್ಯವಾ. ಈ ಆಕಾಶಗಳು ಸಹಿಸಲು ಸಾಧ್ಯವಾ.
ಇಲ್ಲಿ ಮಹಾಮಾರಿ ಬಾರದೇ ಇದ್ದರಲ್ಲವೇ ಆಶ್ಚರ್ಯ.

ಅದೇ ರೀತಿ ಕೊಮುವಾದ ಭೀತಿವಾದ ರಾಜಕೀಯ ವೈರಾಗ್ಯಗಳ ಅಮಲುಗಳು ನೆತ್ತಿಗೇರಿಸಿ ಕೊಂಡವರು ಮನುಷ್ಯ ಜೀವಗಳನ್ನು ಜೀವಂತ ಸುಟ್ಟು ಹಾಕುವುದು ಇತರ ಹಿಂಸಾಚಾರ ಚಟುವಟಿಕೆಗಳನ್ನು ನಡೆಸುವುದೆಲ್ಲಾ ಈ ಭೂಮಿಯಲ್ಲಿ ಅಲ್ಲಾಹನ ಶಾಪವೆರಗಲು ಕಾರಣವಾಗಬಹುದು ಎಂಬುದರಲ್ಲಿ ತರ್ಕವಿಲ್ಲ.

ಇನ್ನು ಪೋಲೀಸರಾಗಲೀ ಯಾರೇ ಆಗಲಿ ಮನುಷ್ಯತ್ವವನ್ನು ಮರೆತು ವರ್ತಿಸುವ ಎಲ್ಲಾ ವರ್ತನೆಗಳು ಅಕ್ಷಮ್ಯ ಎಂಬುದರಲ್ಲಿ ತರ್ಕವಿಲ್ಲ.

ಇಡೀ ಜಗತ್ತು ಕಂಗಾಲಾಗಿ ಶಾಂತಿ ಸಮಾಧಾನ ನೆಮ್ಮದಿಗಾಗಿ ಪೋಲೀಸ್ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳು ಹರಸಾಹಸ ಪಡುತ್ತಿದ್ದಾರೆ.

ಇದೇ ಸಮಯದಲ್ಲಿ ಸಿಕ್ಕಿದ್ದು ಮಕ್ಕಳ ಪುಣ್ಯ ಎಂಬಂತೆ ಕೆಲವು ಮನುಷ್ಯತ್ವವಿಲ್ಲದ ಪೋಲೀಸರು ಮನುಷ್ಯತ್ವದ ಎಲ್ಲಾ ಎಲ್ಲೆಗಳನ್ನು ಮೀರಿ ಸಣ್ಣ ಮಕ್ಕಳು,ಯುವಕರು,ಮುದುಕರು,ಮಹಿಳೆಯರು ಎಂಬ ಯಾವುದೇ ವ್ಯತ್ಯಾಸವಿಲ್ಲದೆ ತೋರಿದ ಹಿಂಸೆಯ ರುದ್ರಾವತಾರ ನೋಡಿದರೆ ಸಹಿಸಲಾಗದು.

ಹೌದು.ಕೆಲವು ಪುಂಡಪುಕಾರಿಗಳನ್ನು ನಿಯಂತ್ರಿಸಲು ಲಾಟಿಯ ಬಿಸಿ ತೋರಿಸ ಬೇಕಾಗಿ ಬರಬಹುದು.

ಅಲ್ಲದೆ ಅವರೇನಾದರೂ ತಪ್ಪು ಮಾಡಿದರೆ ಅದಕ್ಕೆ ಶಿಕ್ಷೆ ನೀಡಲು ಕಾನೂನಾತ್ಮಕವಾಗಿ ಅದರದೇ ಆದ ರೀತಿ ರಿವಾಜುಗಳಿವೆ.ಆದರೆ ಈ ರೀತಿಯ ಹಿಂಸೆಗೆ ಅವಕಾಶವಿಲ್ಲ.

ಆದರೆ ಅದರ ಹೆಸರಿನಲ್ಲಿ ಮನುಷ್ಯ ಜೀವಗಳನ್ನು ಯಾವುದೇ ಮರ್ಮ ನೋಡದೆ ಹೊಡೆದು ಬಡಿದು ಹಿಂಸಿಸುವುದು ಬಹಳ ದೊಡ್ಡ ಶಾಪಕ್ಕೆ ಕಾರಣವಾದೀತೆಂಬುದನ್ನು ಪೋಲೀಸರೂ ಸೇರಿ ಎಲ್ಲರೂ ಅರಿಯಲೇ ಬೇಕು..
✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ 

No comments:

ಈ ವರ್ಷದ ಹಬ್ಬ ಹೇಗೆ ಆಚರಿಸುತ್ತೀರ

  ಸರ್ವಶಕ್ತನಾದ ಅಲ್ಲಹನು ವರ್ಷದ ನಿರ್ದಿಷ್ಟ ದಿನಗಳನ್ನು ದಾಸರಿಗಾಗಿ ನಿಶ್ಚಯಿಸಿದ್ದಾನೆ; ಜೀವನದಲ್ಲಿ ಸಂತೋಷ ಮತ್ತು ಇಸ್ಲಾಮಿಕ್ ಆಚರಣೆಗಳನ್ನು ತೋರಿಸಲು ಆಗಿದೆ  ಇಸ್ಲಾಂ...