MUSTHAFA HASAN ALQADRI OFFICIAL : ಇಸ್ಲಾಮಿನ ಪುರಾತನ ವಿದ್ಯಾಲಯಅಲ್ ಅಝ್‌ಹರ್ ಯುನಿವರ್ಸಿಟಿ.

Translate

Monday, July 13, 2020

ಇಸ್ಲಾಮಿನ ಪುರಾತನ ವಿದ್ಯಾಲಯಅಲ್ ಅಝ್‌ಹರ್ ಯುನಿವರ್ಸಿಟಿ.

ಇಸ್ಲಾಮಿನ ಪುರಾತನ ವಿದ್ಯಾಲಯಗಳ ಪೈಕಿ ಅತ್ಯಂತ ಪ್ರಸಿದ್ದವೂ, ಜಗತ್ತಿನ ಬೌಧ್ದಿಕ ವಲಯದ ಪಥ ಬದಲಿಸುವಲ್ಲಿ ಹೆಚ್ಚಿನ ಪಾತ್ರ ವಹಿಸಿದ ವಿದ್ಯಾಲಯವೂ ಆಗಿದೆ ಅಲ್ ಅಝ್‌ಹರ್ ಯುನಿವರ್ಸಿಟಿ. ಇದು ಈಜಿಪ್ಟ್‌ನ ಕೈರೋದಲ್ಲಿದೆ.
ಫಾತ್ವಿಮೀ ಖಲೀಫಾ ಅಲ್ ಮುಇಸ್ಸ್‌, ಸಿಸಿಲಿಯಾ ಮೂಲದ ಜೌಹರ್ ಎಂಬ ಸೇನಾ ಮೇಧಾವಿಯನ್ನು ಕಳುಹಿಸಿ ಈಜಿಪ್ಟ್ ವಶಪಡಿಸಲು ಆದೇಶಿಸಿದರು. ಹಾಗೂ ತಮ್ಮ ತೆಕ್ಕೆಗೆ ಬಂದ ಆ ಪ್ರದೇಶದಲ್ಲಿ ಒಂದು ಪಟ್ಟಣ ಮತ್ತು ಮಸೀದಿಯನ್ನು ನಿರ್ಮಿಸುವಂತೆ ಅಜ್ಞಾಪಿಸಿದರು. ಹಾಗೆ ಹಿಜ್ರಾ 358(ಕ್ರಿ.ಶ 969)ರಲ್ಲಿ ಕೈರೋ ನಗರವನ್ನು ಮತ್ತು ಅದರ ಪಕ್ಕದಲ್ಲೇ ಒಂದು ಮಸೀದಿಯನ್ನೂ ಜೌಹರ್ ನಿರ್ಮಿಸಿದರು. ಅಂದಾಜು ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಂಡ ಮಸೀದಿಯು ಹಿ. 361 ರಮಳಾನ್ 7(ಜೂನ್ 22 972)ಕ್ಕೆ ನಮಾಜಿಗೆ ಸಜ್ಜೀಕೃತಗೊಂಡಿತು. ಅಂದಿನಿಂದ ಮುಸ್ಲಿಂ ಜಗತ್ತಿನ ಪ್ರಸಿದ್ದ ಮಸೀದಿಗಳ ಸಾಲಿಗೆ ಅಲ್ ಅಝ್‌ಹರ್ ಸೇರಿಕೊಂಡಿತು.
ಈ ಮಸೀದಿಯ ಸುತ್ತಲೂ ಮನೋಹರವಾದ ಹೂದೋಟಗಳಿದ್ದರಿಂದ ಇದಕ್ಕೆ ಅಲ್ ಅಝ್‌ಹರ್ ಎಂಬ ಹೆಸರು ಲಭಿಸಿತ್ತೆಂದು ಹೇಳಲಾಗುತ್ತದೆ. ಭವಿಷ್ಯದಲ್ಲಿ ಶಿಕ್ಷಣದ ಉದ್ಯಾನವಾಗಿ, ಉದ್ಯಾನಗಳು ಚಿಟ್ಟೆ-ಪತಂಗಗಳನ್ನು ತನ್ನತ್ತ ಸೆಳೆಯುವಂತೆ ಈ ವಿದ್ಯಾಲಯವೂ ವಿದ್ಯಾದಾಹಿಗಳನ್ನು ತನ್ನತ್ತ ಸೆಳೆಯಲಿದೆಯೆಂಬ ಅಂದಿನ ವಿಧ್ವಾಂಸರ ದೂರಧೃಷ್ಟಿಯಿಂದಲೇ ಈ ಹೆಸರು ಬರಲು ಕಾರಣವೆಂದೂ ಮತ್ತೊಂದು ವಿಭಾಗ ಚರಿತ್ರೆಗಾರರು ಅಭಿಪ್ರಾಯ ತಾಳುತ್ತಾರೆ. ಇವೆರಡೂ ಅಭಿಪ್ರಾಯಕ್ಕೆ ಮೂರನೇ ವಿಭಾಗದ ನಿಗಮನವು ವ್ಯತಿರಿಕ್ತವಾಗುತ್ತದೆ. ಪ್ರವಾದಿ ಪುತ್ರಿ ಫಾತಿಮಾರ ಇನ್ನೊಂದು ಹೆಸರಾಗಿತ್ತು ಝಹ್‌ರಾ ಬತೂಲ್. ಈ ನಾಮದ ಸ್ಮರಣೆಗಾಗಿ ಅಲ್ ಅಝ್‌ಹರ್ ಎಂದು ನಾಮಾಂಕಿತಗೊಳಿಸಲಾಯಿ ತೆಂಬುದು ಮೂರನೇ ವಿಭಾಗದ ಆಂಬೋಣ. ಫಾತ್ವಿಮೀ ಖಿಲಾಫತ್‌ನ ಅವಧಿಯಲ್ಲೇ ಇದರ ನಿರ್ಮಾಣವಾದ್ದರಿಂದ ಮೂರನೇ ಅಭಿಪ್ರಾಯಕ್ಕೆ ಹೆಚ್ಚಿನ ಬಲವಿದ್ದಂತೆ ಕಾಣುತ್ತದೆ. ಕಾರಣ ಫಾತ್ವಿಮೀ ಎಂಬ ಹೆಸರನ್ನು ಅವರು ತಮ್ಮ ಖಿಲಾಫತ್‌ಗೆ ಸ್ವೀಕರಿಸಿ ಕೊಂಡದ್ದೂ ಫಾತ್ವಿಮಾ ಬೀವಿಯವರ ಸ್ಮರಿಸುವ ಉದ್ದೇಶದಿಂದಾಗಿತ್ತು. ಹೀಗೆ ವ್ಯತ್ಯಸ್ಥ ಅಭಿಪ್ರಾಯಗಳು ಈ ಹೆಸರಿನ ಹಿಂದಿದ್ದರೂ ಇದು ಮಾತ್ರ ತನ್ನ ವಿದ್ಯಾ ಸಂಚಯದ ಮೂಲಕ ಕಾಲಾಂತರದಲ್ಲಿ ತನ್ನ ಹೆಸರನ್ನು ಅನ್ವರ್ಥಗೊಳಿಸಿರುವುದರಲ್ಲಿ ಸಂಶಯವಿಲ್ಲ.
ಮೊದಲು ಮಸೀದಿಯಾಗಿ ತಲೆಯೆತ್ತಿದ್ದರೂ ಮಿಕ್ಕ ವಿದ್ಯಾಲಯಗಳಂತೆ ನಮಾಜಿನ ಹೊರತಾದ ಸಮಯದಲ್ಲಿ ಇದು ಕಾರ್ಯಾಚರಿಸುತ್ತಿದ್ದುದು ಜ್ಞಾನ ಕಲಿಕೆಗಾಗಿತ್ತು. ಈ ಮಸೀದಿಗಳ ಪ್ರತಿಯೊಂದು ಸ್ಥಂಭದಲ್ಲೂ ಒಬ್ಬ ವಿಧ್ವಾಂಸ ಕುಳಿತು ವಿದ್ಯಾರ್ಥಿಗಳಿಗೆ ಭೋಧನೆ ಮಾಡುತ್ತಿದ್ದರು. ಪ್ರತಿಯೊಂದು ಸ್ಥಂಭಗಳೂ ಆ ಕಾಲದ ವಿವಿಧ ವಿಷಯಗಳ ತರಗತಿಗಳಾಗಿತ್ತು. ಈ ಪದ್ದತಿಯೇ ನಂತರ ಆಧುನೀಕರಣಗೊಂಡು ಪ್ರತ್ಯೇಕ ತರಗತಿಗಳಾಗಿ ರೂಪಾಂತರ ಪಡೆದದ್ದು. ಸಾಮೂಹಿಕವಾಗಿ ನಮಾಜು ಮಾಡುವ ಮಸೀದಿಗಳನ್ನು ಜಾಮಿಅ ಎನ್ನಲಾಗುತ್ತಿತ್ತು. ನಂತರ ಮಸೀದಿಯ ಸ್ಥಂಭಗಳಲ್ಲಿ ನಡೆಯುತ್ತಿದ್ದ ಭೋಧನೆಗಳು ಕಟ್ಟಡಗಳಿಗೆ ವರ್ಗಾವಣೆಯಾದಾಗ ಅದಕ್ಕೂ ಕೂಡಾ ಜಾಮಿಅ ಎಂಬ ಹೆಸರೇ ಲಭಿಸಿತು. ಆದ್ದರಿಂದಲೇ ಇಂದು ಪ್ರಸಿದ್ದ ವಿದ್ಯಾಲಯಗಳು ಜಾಮಿ‌ಅ ಎಂಬ ಹೆಸರಿನಲ್ಲಿ ಅರಿಯಲ್ಪಡುವುದನ್ನು ಕಾಣಬಹುದು.
ಮಸೀದಿಯಾಗಿ ತಲೆಯೆತ್ತಿದ ಅಲ್‌ ಅಝ್‌ಹರ್‌ ವಿದ್ಯಾರ್ಥಿಗಳಿಂದಲೂ, ವಿಧ್ವಾಂಸರಿಂದಲೂ ನಿಬಿಡವಾದವು. ಹಾಗೆ ಅಲ್‌ಹಝ‌ಹರ್ ನಂತರದ ಕಾಲದಲ್ಲಿ ಮಸೀದಿಯೆಂಬುದಕ್ಕಿಂತ ವಿದ್ಯಾಲಯವೆಂದೇ ಜನಜನಿತವಾಯಿತು. ನಿರ್ಮಾಣದ ಮೂರನೇ ವರ್ಷದಲ್ಲೇ ಅಲ್‌ಅಝ್‌ಹರ್‌ ಶೈಕ್ಷಣಿಕವಾಗಿ ಉಛ್ರಾಯತೆಯನ್ನು ಕಾಣಲಾರಂಭಿಸಿತು.
ಹಿ.365(ಕ್ರಿ.ಶ 975)ರಲ್ಲಿ ಅಲ್‌ಅಝ್‌ಹರ್‌ನ ಅಂಗಳದಲ್ಲಿ ಒಂದು ವಿಶೇಷ ಸಂವಾದವೊಂದು ನಡೆಯಿತು. ಸುಲ್ತಾನ್ ಅಲ್‌ಮುಇಸ್ಸ್‌ರವರ ಸಮ್ಮುಖದಲ್ಲಿ ಚೀಫ್ ಜಸ್ಟೀಸ್ ಹಸನ್ ಅಲಿ ಬಿನ್ ಅಲ್ ನುಅ್‌ಮಾನ್ ಖೈರವಾನಿ ಎಂಬ ವಿಧ್ವಾಂಸರು, ಇಮಾಂ ಅಬೂ ಹನೀಫಾರವರ 'ಅಲ್ ಇಖ್ತಿಸ್ವಾರ್' ಎಂಬ ಕರ್ಮಶಾಸ್ತ್ರ ಗ್ರಂಥವನ್ನು ಮಂಡಿಸಿದರು. ಹಲವಾರು ವಿದ್ವಾಂಸರು, ವಿದ್ಯಾರ್ಥಿಗಳನ್ನೊಳಗೊಂಡ ಈ ಸಂವಾದದಲ್ಲಿ ಮುಸ್ಲಿಮೇತರ ಜ್ಞಾನ ದಾಹಿಗಳು, ಚಿಂತಕರೂ ಕೂಡಾ ಭಾಗವಹಿಸಿದ್ದರು. ಈ ಸಂವಾದ ಕಾರ್ಯಕ್ರಮವೇ ನಂತರದ ಕಾಲದಲ್ಲಿ ವಿಶ್ವವಿದ್ಯಾಲಯಗಳಲ್ಲಿ ಸೆಮಿನಾರ್‌ಗಳ ಆಯಾಮವನ್ನು ಪಡೆದದ್ದು. ಚೀಫ್ ಜಸ್ಟೀಸ್ ಎಂಬ ಹೆಸರು ಮೊದಲು ಲಭಿಸಿದ್ದೂ ನುಅ್‌ಮಾನ್ ಖೈರವಾನಿಯವರಿಗೆ ಎನ್ನಲಾಗುತ್ತದೆ.
ಅಲ್‌ ಅಝ್‌ಹರ್‌ನಲ್ಲಿ ನಡೆಯುತ್ತಿದ್ದ ತರಗತಿಗಳು ಧಾರ್ಮಿಕವೇ ಆಗಿದ್ದರೂ ಸಾಮಾಜಿಕ, ರಾಜಕೀಯ, ಮತ್ತು ಬೌಧ್ದಿಕ ನೆಲಗಟ್ಟುಗಳೊಂದಿಗೆ ಕೂಡಿದ್ದಾಗಿತ್ತು. ಅಝೀಝ್ ಬಿಲ್ಲಾಹಿಯವರ ಕಾಲದಲ್ಲಿ ಅಲ್ ಅಝ್‌ಹರ್ ಶಿಕ್ಷಣ ಕ್ಷೇತ್ರದಲ್ಲಿ ಔನ್ನತ್ಯವನ್ನು ಪಡೆಯಿತು. ಅಲ್ ಮುಇಸ್ಸ್ ಮತ್ತು ಅಲ್ ಅಝೀಝ್ ಬಿಲ್ಲಾಹಿಯವರ ಮಂತ್ರಿಯಾಗಿದ್ದ ಜಾಕಬ್ ಬಿನ್ ಕಿಲ್ಲೀಸ್ (Jacob bin killis) ರವರ ರಿಸಾಲತುಲ್ ಅಝೀಝಿಯಾ ಎಂಬ ಕಾನೂನು ಗ್ರಂಥವನ್ನು ಇಲ್ಲಿ ಪಠ್ಯಕ್ರಮಕ್ಕೆ ಸೇರಿಸಲಾಗಿತ್ತು. 37ಕಾನೂನು ತಜ್ಞರನ್ನು ಇಲ್ಲಿ ಉಪನ್ಯಾಸಕ್ಕಾಗಿ ನೇಮಿಸಲಾಗಿತ್ತು.! ಅವರಿಗೆ ವೇತನ ಮತ್ತು ವಸತಿ ಸೌಕರ್ಯವನ್ನು ಅಂದಿನ ಖಿಲಾಫತ್ ಒದಗಿಸುತ್ತಿದ್ದವು. ಆ ಕಾಲದಲ್ಲೇ ಬೌಧ್ದಿಕವಾಗಿ ಈ ವಿದ್ಯಾಲಯವು ಎಷ್ಟು ಔನ್ನತ್ಯವನ್ನು ಪಡೆದಿತ್ತೆಂಬುದು ಇದರಿಂದ ಶ್ರುತವಾಗುತ್ತದೆ.
ಫಾತ್ವಿಮೀ ಕಾಲಘಟ್ಟದಲ್ಲಿ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣದ ಪ್ರೌಢ ಸಾನಿಧ್ಯವಾಗಿತ್ತು ಅಲ್‌ಅಝ್‌ಹರ್. ಇತರ ತರಗತಿಗಳ ಹೊರತಾಗಿ ಮಹಿಳೆಯರಿಗೆ ವಿಶೇಷ ಧಾರ್ಮಿಕ ತರಬೇತಿಗಳೂ ಇಲ್ಲಿ ನಡೆಯುತ್ತಿದ್ದವು. ಅಂದಾಜು ಎರಡು ಶತಮಾನಗಳ ಕಾಲ ಜಗತ್ತಿನ ವಿಖ್ಯಾತ ನ್ಯಾಯಾಧೀಶರ, ಗಣಿತ ತಜ್ಞರ, ಚೀಫ್ ಟಾಕ್ಸ್ ಕಲಕ್ಟರ್‌ಗಳ ಕೇಂದ್ರವೂ ಆಗಿತ್ತು ಅಲ್ ಅಝ್‌ಹರ್.
ಅಯ್ಯೂಬಿ ಕಾಲಘಟ್ಟದಲ್ಲಿ ಅಲ್‌ಅಝ್‌ಹರ್‌ನ ಬೆಳವಣಿಗೆ ಕುಂಠಿತಗೊಳ್ಳಲಾರಂಭಿಸಿತು. ಸ್ವಲಾಹುದ್ದೀನ್ ಅಯ್ಯೂಬಿಯವರ ನಂತರ ಅಯ್ಯೂಬೀ ಆಡಳಿತಗಾರರು ಮಿಕ್ಕವರೂ ಸ್ವಾರ್ಥಿಗಳೂ, ಧನ ಮೋಹಿಗಳೂ ಆಗಿದ್ದರು. ಅವರು ಜ್ಞಾನಕ್ಕೆ ಮತ್ತು ವಿದ್ಯಾಲಯಗಳಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಿಲ್ಲ. ಒಂದು ಶತಮಾನಗಳ ಅವಧಿಗೆ ವಿದ್ಯಾಲಯವು ಚಲನಾತ್ಮಕವಾಗಿ ಶುಷ್ಕತೆಯನ್ನು ಕಂಡಿತ್ತು. ಆದರೂ ತನ್ನ ಪ್ರೌಢಿ, ಹಿರಿಮೆ, ಧಾರ್ಮಿಕ ಶ್ರೇಯಸ್ಸು, ಭಾಷಾ ಸಂಪನ್ನತೆಯನ್ನು ಅಲ್‌ಅಝ್‌ಹರ್‌ ಕಾಪಾಡಿಕೊಂಡಿತ್ತು.
ಮಾಂಗೋಲಿಯನ್ನರು ಇಸ್ಲಾಮೀ ರಾಷ್ಟ್ರಗಳ ಸರಹದ್ದು ದಾಟಿ ಹಲವು ಖಿಲಾಫತ್‌ನ್ನು ಮಕಾಡೆ ಮಲಗಿಸಿ, ಹಲವು ಪಟ್ಟಣಗಳನ್ನು ಸ್ಮಶಾನಗೊಳಿಸಿ, ಹಲವು ವಿದ್ಯಾಲಯಗಳನ್ನು ಧ್ವಂಸ ಮಾಡಿ, ಸಂಹಾರ ತಾಂಡವ ನಡೆಸಿದರೆ ಈಜಿಪ್ಟಿನಲ್ಲಿ ಮಾತ್ರ ಅದು ಸಾಧ್ಯವಾಗಲಿಲ್ಲ. ಅಂದಿನ ವಿಶ್ವವಿಖ್ಯಾತ ವಿಧ್ವಾಂಸರಾಗಿದ್ದ ಅಬ್ದುಲ್ಲಾಹಿಬ್ನು ಅಬ್ದುಸ್ಸಲಾಂರವರ ನಾಯಕತ್ವದಲ್ಲಿ ಅಲ್ ಅಝ್‌ಹರ್‌ನ ವಿಧ್ವಾಂಸರು ಮತ್ತು ವಿದ್ಯಾರ್ಥಿಗಳು ಮಾಂಗೋಲಿಯನ್ನರ ವಿರುದ್ದ ಬೀದಿಗಿಳಿದಿದ್ದರು. ಜನರಲ್ಲಿ ಜಿಹಾದ್‌ನ ಬಗ್ಗೆ ಜಾಗೃತಿ ಮೂಡಿಸಿ ಮಾಂಗೋಲಿಯನ್ನರ ವಿರುದ್ದ ಬಡಿದೆಬ್ಬಿಸಿದರು. ಮಾಂಗೋಲಿಯನ್ನರನ್ನು ಸಮರ್ಥವಾಗಿ ಬಗ್ಗು ಬಡಿಯಲು ಅಂದಿನ ಖಲೀಫಾ ಸೈಫ್‌ಬ್ನು ಖುತ್ವ್‌ಸ್‌ರಿಗೆ ಸಾಧ್ಯವಾದದ್ದು ಈ ವಿಧ್ವಾಂಸರ ಸಂಪೂರ್ಣ ಸಹಕಾರದಿಂದಾಗಿತ್ತು.
ಮಂಮ್ಲೂಕ್‌ಗಳ ಕಾಲದಲ್ಲಾಗಿತ್ತು (ಹಿ.648-922 /ಕ್ರಿ.ಶ 1250-1517) ಮೊಘಲರ ಮಧ್ಯೇಶ್ಯಾ ಪ್ರವೇಶ ಮತ್ತು ಸ್ಪೈನ್‌ನ ಮುಸ್ಲಿಂ ಆಡಳಿತದ ಪತನ. ಈ ಸಂದರ್ಭದಲ್ಲಿ ಗಡಿಪಾರು ಮಾಡಲ್ಪಟ್ಟು ಮನೆ, ಸೂರು ಕಳೆದುಕೊಂಡ ವಿಧ್ವಾಂಸರಿಗೆ ಅಭಯ ನೀಡಬೇಕಾದ ಬಾಧ್ಯತೆಯು ಅಲ್‌ಅಝ್‌ಹರ್‌ನ ಹೆಗಲಿಗೆ ಬಿತ್ತು‌‌. ಹಿಜ್ರಾ 8-9 (ಕ್ರಿ.ಶ 14-15)ನೇ ಶತಮಾನದಲ್ಲಿ ಅಲ್ ಅಝ್‌ಹರನ್ನು ಔನ್ನತ್ಯದ ತುತ್ತತುದಿಗೇರಿಸುವಲ್ಲಿ ಈ ವಿಧ್ವಾಂಸರ ಪ್ರಯತ್ನ ಮತ್ತು ಪಾತ್ರಗಳು ನಿರ್ಣಾಯಕವಾಗಿತ್ತು.
ಖಗೋಳ ಮತ್ತು ಭೂಗೋಳ ಕ್ಷೇತ್ರಗಳಿಗೂ ಅಲ್‌ಅಝ್‌ಹರ್‌ ಪ್ರಧಾನ ಕೊಡುಗೆಯನ್ನು ನೀಡಿದೆ. ವೈದ್ಯಶಾಸ್ತ್ರ, ಗಣಿತಶಾಸ್ತ್ರ, ಜೀವಶಾಸ್ತ್ರ, ಇತಿಹಾಸ ಹೀಗೆ ಲೌಕಿಕ ಕ್ಷೇತ್ರದ ಹಲವು ಆಯಾಮಗಳಲ್ಲಿ ಖ್ಯಾತನಾಮರೆನಿಸಿಕೊಂಡ ವಿಧ್ವಾಂಸರು ಇಲ್ಲಿ ಬೋಧನೆ ನಡೆಸುತ್ತಿದ್ದರು. ಮುಸ್ಲಿಂ ರಾಜಕೀಯ ಮತ್ತು ಬೌದ್ಧಿಕ ಶಿಕ್ಷಣ ಕ್ಷೇತ್ರದ ನಿಷ್ಕ್ರಿಯತೆಯ ಕಾಲದಲ್ಲಿ ಮೇಲೆ ಉಲ್ಲೇಖಿಸಲ್ಪಟ್ಟ ವಿಜ್ಞಾನ ಕ್ಷೇತ್ರಗಳ ಉಳಿವಿಗಾಗಿ ವಿದ್ವಾಂಸರು ಅಜಸ್ರ ಪ್ರಯತ್ನ ನಡೆಸಿದ್ದರು.
ಜಗತ್ತಿನಾದ್ಯಂತ ವಿದ್ಯಾದಾಹಿಗಳು ಪುರಾತನ ಕಾಲದಲ್ಲೇ ಅಝ್‌ಹರ್‌ಗೆ ವಿದ್ಯಾರ್ಜನೆಗಾಗಿ ತೆರಳುತ್ತಿದ್ದರು. ಆ ಪೈಕಿ ಭಾರತದ ಪ್ರಪ್ರಥಮ ವಿದ್ಯಾರ್ಥಿಯೆಂದರೆ ಫತುಹುಲ್ ಮುಈನ್ ಕರ್ತೃ ಝೈನುದ್ದೀನ್ ಮುಖ್ದೂಮರು. ಮಕ್ಕಾದಲ್ಲಿ ವಿದ್ಯಾರ್ಜನೆ ನಡೆಸಿದ ಮಖ್ದೂಮರು ಉನ್ನತ ವ್ಯಾಸಂಗಕ್ಕಾಗಿ ಮಕ್ಕಾದಿಂದ ಕಾಲ್ನಡಿಗೆಯ ಮೂಲಕ ಈಜಿಪ್ಟಿನ ಅಲ್‌ಅಝ್‌ಹರ್‌‌ಗೆ ತೆರಳಿದ್ದರು.! ಅಂದಿನ ಉದ್ದಾಮ ವಿಧ್ವಾಂಸರೂ, ಖಾಝಿಯೂ ಆಗಿದ್ದ ಅಬ್ದುರ್ರಹ್ಮಾನ್ ಅಲ್ ಹದಬಿಯವರಿಂದ ಹದೀಸ್‌ನಲ್ಲಿ ಹೆಚ್ಚಿನ ಜ್ಞಾನವನ್ನು ಕರಗತಗೊಳಿಸಿಕೊಂಡರು.
ವಿವಿಧ ಖಿಲಾಫತ್ತಿನ ಉನ್ನತಿ ಮತ್ತು ಅವನತಿಯನುಸಾರ ಅಲ್ ಅಝ್‌ಹರ್ ಕೂಡಾ ಉಚ್ಚ್ರಾಯ ಮತ್ತು ತಟಸ್ಥತೆಯನ್ನು ಕಂಡಿದೆ. ಕಾಲದ ಏಳು ಬೀಳುಗಳ ಏಟು ಈ ವಿದ್ಯಾಲಯದ ಮೇಲೆ ಚೆನ್ನಾಗಿಯೇ ಬಿದ್ದಿದೆ. ಉಸ್ಮಾನಿಯಾ ಖಿಲಾಫತ್‌ನ ಸಮಯದಲ್ಲಿ ವಿದ್ವಾಂಸರಿಗೆ ಅಧ್ಯಯನ, ಅನ್ವೇಷಣೆ, ಪ್ರಯೋಗಗಳಿಗೆ ಬೇಕಾದ ಸರ್ವ ಸಲಕರಣೆಗಳು ವಖ್ಫ್‌ನ ಹಣದಿಂದ ಖರೀದಿಸಲಾಗುತ್ತಿತ್ತು. ಉಸ್ಮಾನಿಯ ಖಿಲಾಪತ್ ತುರ್ಕೀ ಕೇಂದ್ರೀಕೃತವಾಗಿ ನಡೆಯುತ್ತಿದ್ದರೂ ಆ ಕಾಲಕ್ಕೆ ಪ್ರತಿಷ್ಟಿತ ವಿದ್ಯಾಲಯವಾಗಿದ್ದ ಅಲ್‌ ಅಝ್‌ಹರ್‌ನ 'ಇಮಾಂ'ನ ಸ್ಥಾನವನ್ನು ಈಜಿಪ್ಟಿನ ವಿದ್ವಾಂಸರಿಗೇ ಮೀಸಲಿರಿಸಿದ್ದರು.
1789ರ ಜುಲೈಯಲ್ಲಿ ನೆಪೊಲಿಯನ್ ಈ ನಗರವನ್ನು ವಶಪಡಿಸಿಕೊಂಡ. ಸಮಕಾಲೀನ ಮುಸ್ಲಿಂ ಜಗತ್ತಿನ ಅತ್ಯಂತ ಪ್ರಸಿದ್ದ ವಿಶ್ವವಿದ್ಯಾಲಯವಾಗಿ ಆತ ಇದನ್ನು ಘೋಷಿಸಿದ. ಕಾಲಾಂತರದಲ್ಲಿ ಈಜಿಪ್ಟಿನ ವೈಭವಕ್ಕೆ ಮರುಳಾದ ಫ್ರೆಂಚರು ಅಲ್ಲಿ ಮೆಲ್ಲಗೆ ವಸಾಹತು ಸ್ಥಾಪಿಸುವ ಚಿಂತನೆ ನಡೆಸಿದರು. ಫ್ರೆಂಚರ ವಲಸೆ ಮೆಲ್ಲನೆ ತಾರಕಕ್ಕೇರಿ ಆ ನಾಡಿನ ಸಂಸ್ಕೃತಿ, ಸಂಸ್ಕಾರದ ಮೇಲೆ ಪರಿಣಾಮ ಬೀರುತ್ತದೆಯೆಂದರಿತಾಗ ಸ್ವದೇಶೀ ಆಸ್ಮಿತೆಯನ್ನು ನಾಡಿನಾದ್ಯಂತ ಎಚ್ಚರಿಸಿದ್ದೂ ಅಲ್‌ಹಝ್‌ಹರ್‌ನ ವಿದ್ವಾಂಸರಾಗಿದ್ದರು. ಫ್ರೆಂಚ್ ವಲಸೆಯ ವಿರುದ್ದ ಪ್ರಪ್ರಥಮ ಪ್ರತಿರೋಧದ ಕಹಳೆ ಮೊಳಗಿದ್ದೂ ಅಲ್‌ಅಝ್‌ಹರ್‌ನಲ್ಲಾಗಿತ್ತು. ಫ್ರೆಂಚ್ ವಲಸೆ ವಿರೋಧಿಗಳ ಸಂಗಮಸ್ಥಾನ ಮತ್ತು ಪ್ರತಿಭಟನಾಕಾರರ ಆಸ್ಥಾನವೂ ಆಗಿತ್ತು ಆ ಕಾಲಕ್ಕೆ ಅಲ್‌ಅಝ್‌ಹರ್‌. ಶೇಖ್ ಮುಹಮ್ಮದ್ ಸಾದಾತ್‌ರ ನೇತೃತ್ವದಲ್ಲಿ ಒಂದು ಕ್ರಾಂತಿಕಾರಿ ಪಡೆಯೇ ಫ್ರೆಂಚ್ ವಲಸೆಯ ವಿರುದ್ದ ಬೀದಿಗಿಳಿಯಿತು. ಆದರೆ ಫ್ರೆಂಚ್ ವಲಸೆ ವಿರುದ್ದದ ಈ ಹೋರಾಟಗಳೆಲ್ಲಾ ವಿಫಲಗೊಂಡ ಮೇಲೆ ಫ್ರೆಂಚರ ಆಧಿಕ್ಯದಿಂದಾಗಿ ಅಲ್ಲಿ ಅಧ್ಯಯನ, ಮತ್ತು ಶಿಕ್ಷಣ ನಡೆಸುವುದು ಅಸಾಧ್ಯವೆಂದು ಅಲ್ಲಿನ ವಿಧ್ವಾಂಸರು ಮಸೀದಿ ಮತ್ತು ವಿದ್ಯಾಲಯವನ್ನು ಮುಚ್ಚಿದರು. ಅಲ್ ಅಝ್‌ಹರ್‌ನ ಸುಧೀರ್ಘ ಚರಿತ್ರೆಯಲ್ಲಿ ಮುಚ್ಚಲ್ಪಟ್ಟದ್ದು ಅದು ಪ್ರಥಮ ಬಾರಿಗೆಯಾಗಿತ್ತು. ಈ ತಾತ್ವಿಕ ಪ್ರತಿರೋಧದ ಬಳಿಕ ಅಂದರೆ ಮೂರು ವರ್ಷಗಳ ನಂತರ ಫ್ರೆಂಚರನ್ನು ಗಡಿಪಾರು ಮಾಡಿದ ಮೇಲೆ ಅಲ್ ಅಝ್‌ಹರ್ ಪೂರ್ವ ಸ್ಥಿತಿಗೆ ಬಂದು, ವಿದ್ಯಾರ್ಥಿಗಳನ್ನೂ ಅಧ್ಯಾಪಕರನ್ನೂ ಮೊದಲಿನಂತೆ ಸ್ವೀಕರಿಸಲಾರಂಭಿಸಿತು.
ಹೀಗೆ ಚರಿತ್ರೆಯಲ್ಲಿ ಹಲವು ಏಳು ಬೀಳುಗಳನ್ನು ಕಂಡ ಈ ವಿದ್ಯಾಲಯ ಇಂದು ಜಗತ್ತಿನ ಪುರಾತನ ವಿಶ್ವವಿದ್ಯಾಲಯಗಳ ಪೈಕಿ ಅಗ್ರಪಂಕ್ತಿಗೆ ಸೇರಿದೆ. ಹಲವು ವಿದ್ಯಾದಾಹಿಗಳಿಗೆ ಜ್ಞಾನ ಸಿಂಚನವನ್ನು ನೀಡಿದ ಅಲ್ ಅಝಹರ್ ಈಗಲೂ ತನ್ನ ಹಳೆಯ ಅದೇ ಪ್ರೌಢಿ-ಪ್ರತಾಪವನ್ನು ಉಳಿಸಿಕೊಂಡಿದೆ. ಅಷ್ಟೇ ಅಲ್ಲದೆ ಈಜಿಪ್ಟಿನಾದ್ಯಂತ ಭಾಧಿಸಿದ ನೂತನ ವಿಚಾರಧಾರೆಗಳಿಂದ ಅಂತರ ಕಾಪಾಡಿಕೊಂಡ ಈ ವಿದ್ಯಾಲಯವು ಈಗಲೂ ಅಹ್ಲುಸ್ಸುನ್ನದ ಬುನಾದಿಯಲ್ಲೇ ಭಧ್ರವಾಗಿ ನೆಲೆಯೂರಿದೆ‌. ಮತ್ತು ಜಾಗತಿಕ ಅಹ್ಲುಸ್ಸುನ್ನದ ಪ್ರಭರ ಕೇಂದ್ರಗಳಲ್ಲೊಂದೂ ಆಗಿದೆ.
(ಕಳೆದ ಜುಲೈ ತಿಂಗಳಲ್ಲಿ ಸುನ್ನತ್ ಮಾಸಿಕದಲ್ಲಿ ಪ್ರಕಟವಾದ ಲೇಖನ)
-ಟಿ.ಎಂ ಅನ್ಸಾರ್ ಸ‌ಅದಿ ತಂಬಿನಮಕ್ಕಿ

No comments:

ರಂಜಾನ್ ಪಾವನ ಮಾಸ

ರಂಜಾನ್ ಪಾವನ ಮಾಸ ನಮ್ಮಲ್ಲಿರುವ ಕೆಲವು ಕೆಟ್ಟ ಆಹಾರ ಪದ್ಧತಿಗಳನ್ನು ತೊಡೆದುಹಾಕಲು,ಹಾಗೂ ಜೊತೆಗೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಒಂದು ಅವಕಾಶವಾಗಿದೆ, ...