MUSTHAFA HASAN ALQADRI OFFICIAL : ಹದಿನಾಲ್ಕು ಶತಮಾನಗಳ ಹಿಂದಿನ ಅನ್ಸಾರ್ ಗಳನ್ನು ನೆನಪಿಸುವ ಸಹಾಯ್ ತಂಡ

Translate

Friday, May 21, 2021

ಹದಿನಾಲ್ಕು ಶತಮಾನಗಳ ಹಿಂದಿನ ಅನ್ಸಾರ್ ಗಳನ್ನು ನೆನಪಿಸುವ ಸಹಾಯ್ ತಂಡ


 ಹದಿನಾಲ್ಕು ಶತಮಾನಗಳ ಹಿಂದಿನ ಅನ್ಸಾರ್ ಗಳನ್ನು ನೆನಪಿಸುವ ಸಹಾಯ್ ತಂಡ

✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ

ಮುಹಮ್ಮದುರ್ರಸೂಲುಲ್ಲಾಹಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಸಹಾಬಿಗಳ ಪದವಿಗೆ ಯಾರನ್ನೂ ಹೋಲಿಕೆ ಮಾಡುವಂತಿಲ್ಲ.

ಅದು ಪ್ರವಾದಿಗಳ ನಂತರದ ಪರಮೋನ್ನತ ಪದವಿ ಯಾಗಿರುತ್ತದೆ.

لو أن أحدكم أنفق مثل أحد ذهبا ما أدرك مُدّ أحدهم ولا نصيفه

ನಿಮ್ಮಲ್ಲಿ ಯಾರಾದರೊಬ್ಬರು ಒಬ್ಬರು ಉಹ್ದು ಎಂಬ ಪರ್ವತ ಸಮಾನವಾದ ಚಿನ್ನವನ್ನು ದಾನ ಮಾಡಿದರೆ ನನ್ನ ಸ್ವಹಾಬಿಗಳಲ್ಲಿ ಒಬ್ಬರು ಮಾಡುವ ಒಂದು ಹಿಡಿ ಅಥವಾ ಅರ್ಧ ಹಿಡಿ ದಾನಕ್ಕೆ ಸಮಾನವಾಗಲು ಸಾಧ್ಯವಿಲ್ಲ.


ಸತ್ಯವಿಶ್ವಾಸಿಯಾಗಿ ಒಂದು ಸೆಕೆಂಡು ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಸನ್ನಿಧಿಯಲ್ಲಿ ಭಾಗವಹಿಸುವ ಮೂಲಕ ಪ್ರಾಪ್ತವಾಗುವ ಸ್ವಹಾಬಿ ಎಂಬ ಮಹೋನ್ನತ ಪದವಿಯನ್ನು ತಲುಪಲು ಸ್ವಹಾಬಿಯಲ್ಲದವರು ತಮ್ಮ ಜೀವನಪೂರ್ತಿ ಹಿಮಾಲಯ ಸಮಾನವಾದ ಸತ್ಕರ್ಮಗಳನ್ನು ಮಾಡಿದರೂ ಸಾಧ್ಯವಿಲ್ಲ ಎಂದಾಗಿದೆ ಇದರ ತಾತ್ಪರ್ಯ.


ಅದರಲ್ಲೂ ಸ್ವಹಾಬಿಗಳಲ್ಲಿ ಅನ್ಸಾರುಗಳು ಎಂಬ ಹೆಸರಿನಲ್ಲಿ ಗುರುತಿಸಲ್ಪಡುವ ಮದೀನಾ ನಿವಾಸಿಗಳಾದ ಸ್ವಹಾಬಿಗಳು ಸ್ವಹಾಬಿಗಳಲ್ಲಿ ವಿಶೇಷ ಸ್ಥಾನಮಾನ ವನ್ನು ನೀಡಲ್ಪಟ್ಟವರೂ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರಿಗೆ ಅತ್ಯಂತ ಪ್ರೀತಿಯಿರುವವರೂ ಆಗಿದ್ದರು.

ಇದಕ್ಕೆ ಕಾರಣ ಅವರ ಅಸಾಮಾನ್ಯ ಕಾರುಣ್ಯ ಸೇವೆ ಹಾಗೂ  ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರೊಂದಿಗಿನ ಅಪಾರ ಪ್ರೀತಿಯಾಗಿತ್ತು.

ಮಕ್ಕಾದಿಂದ ಸತ್ಯಪ್ರಚಾರಕ್ಕಾಗಿ ತಮ್ಮದೆಲ್ಲವನ್ನು, ತಮ್ಮವರೆಲ್ಲರನ್ನು ಉಪೇಕ್ಷಿಸಿ ಮದೀನಾಕ್ಕೆ ಹಿಜ್ರಾ ಬಂದಿದ್ದ ನಬಿ ಸಲ್ಲಲ್ಲಾಹು ಅಲೈಹಿ ವಸಲ್ಲಮರನ್ನು ಮತ್ತು ಮುಹಾಜಿರ್ ಗಳಾದ ಸಹಾಬಿಗಳನ್ನು ಮದೀನಾ ನಿವಾಸಿಗಳಾದ ಈ ಅನ್ಸಾರ್ ಗಳು ಉಪಚರಿಸಿದ ರೀತಿ ಮಾತ್ರ ಚರಿತ್ರೆಯಲ್ಲಿ ಸರಿಸಾಟಿಯಿಲ್ಲದ್ದಾಗಿತ್ತು.

ತಮಗಿಂತಲೂ ತಮ್ಮ ಕುಟುಂಬದ ಸದಸ್ಯರಿಗಿಂತಲೂ ಪ್ರಾಧಾನ್ಯತೆ ಹಾಗೂ ಮಹತ್ವವನ್ನು ಎಲ್ಲಾ ವಿಷಯಗಳಲ್ಲಿ ಇವರಿಗೆ ನೀಡುತ್ತಿದ್ದರು.ಮಾತ್ರವಲ್ಲ ತಮ್ಮ ಪತ್ನಿಯರನ್ನು ತ್ವಲಾಖ್ ಹೇಳಿ ಪತ್ನಿಯರಿಲ್ಲದ ಮುಹಾಜಿರ್ ಗಳಾದ ಸಹಾಬಿಗಳಿಗೆ ವಿವಾಹ ಮಾಡಿಕೊಡಲೂ ಸಿದ್ಧರಾಗುತ್ತಿದ್ದರು ಎಂದು ಚರಿತ್ರೆಯಿಂದ ಯಾರಿಗೂ ತಿಳಿಯಬಹುದಾದ ಸತ್ಯ ಸಂಗತಿ ಯಾಗಿದೆ. 

ಇವರ ಇಂತಹ ಅಸಾಮಾನ್ಯ ಕಾರುಣ್ಯ ಸೇವೆಯ ಕಾರಣದಿಂದಲೇ ಇವರಿಗೆ ಈ ಸಹಾಯಿಗಳು (ಅನ್ಸಾರ್ ಗಳು) ಎಂಬ ವಿಶೇಷ ನಾಮ ಲಭಿಸುವಂತಾಯ್ತು.


ಇದಿಷ್ಟು ಬರೆಯಲು ಕಾರಣ ಮೊನ್ನೆ ನಮ್ಮ ಮನೆಯ ಪಕ್ಕದಲ್ಲಿ ಒಂದು ಹೆಂಗಸಿಗೆ ಅನಾರೋಗ್ಯ ಕಾರಣ ಮನೆಯಲ್ಲೇ ಚಿಕಿತ್ಸೆ ನಡೆಯುತ್ತಿತ್ತು.ನಂತರ ವಿಷದವಾಗಿ ಅರಿತಾಗ ಅವರಿಗೆ ಆರೋಗ್ಯ ಸ್ವಲ್ಪ ಹದಗೆಟ್ಟಿದ್ದು

ಎರಡು ದಿನಗಳ ಹಿಂದೆ ಬಹಳ ಸೀರಿಯೆಸ್ ಆಗಿತ್ತು. 

ಆ ಸಮಯದಲ್ಲಿ ರಾತ್ರೋ ರಾತ್ರಿ ಅವರಿಗೆ ಬೇಕಾದ ಚಿಕಿತ್ಸೆಯ ಎಲ್ಲಾ ತುರ್ತು ವ್ಯವಸ್ಥೆಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸಿದ್ದು ಮೂಡುಬಿದಿರೆ,ಕೈಕಂಬ ಸರ್ಕಲ್ ಕರ್ನಾಟಕ ಮುಸ್ಲಿಂ ಜಮಾಅತ್ ನ ಸಹಾಯಿ ತಂಡದ ಎಸ್ಸೆಸ್ಸೆಫ್ ಮತ್ತು ಎಸ್.ವೈ.ಎಸ್  ಸಂಘಟನೆಯ ಕಾರ್ಯಕರ್ತರು ಎಂದು ತಿಳಿದಾಗ ನನಗೆ ಬಹಳ ಅಚ್ಚರಿಯಾಯಿತು.

ಯಾಕೆಂದರೆ ನಮ್ಮ ಅಕ್ಕ ಪಕ್ಕದಲ್ಲೇ ನಡೆದ ಈ ಘಟನೆಯಲ್ಲಿ ನಾನೂ ಸೇರಿದಂತೆ ಯಾರಿಗೂ ತಿಳಿಯದ ರೀತಿಯಲ್ಲಿ ಬಹಳ ಆತ್ಮಾರ್ಪಣೆ ಯಿಂದ ಇಂತಹ ಸೇವೆ ಮಾಡುವುದೆಂದರೆ ಅದು ಹಿಂದಿನ ಮದೀನಾದ ಅನ್ಸಾರ್ ಗಳ ಸೇವೆಯನ್ನು ಸ್ವಲ್ಪ ಮಟ್ಟಿಗೆ ನೆನಪಿಸುತ್ತದೆ ಎಂದು ಹೇಳಿದರೆ ಅತಿಶಯೋಕ್ತಿ ಆಗಲಾರದು.

ಇದು ಒಂದು ಎರಡು ಉದಾಹರಣೆಗಳಲ್ಲ.

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಈ ಸೇವೆಯು ಸದ್ದಿಲ್ಲದೆ ಮುಂದುವರಿಯುತ್ತಲೇ ಇದೆ.

ಕೋವಿಡ್ ರೋಗಿಗಳ ಶಿಸ್ರೂಸೆ ಮಾತ್ರವಲ್ಲದೆ ಈ ಲಾಕ್ ಡೌನ್ ಅವಧಿ ಯಲ್ಲಿ ಕರ್ನಾಟಕದ ಉದ್ದಗಲಕ್ಕೂ ಕಷ್ಟ ಅನುಭವಿಸುತ್ತಿರುವ ಸಾವಿರಾರು ಕುಟುಂಬಗಳಿಗೆ ಮುಸ್ಲಿಂ ಜಮಾಅತ್ ನ ಸಹಾಯ್,ಎಸ್ವೈಎಸ್ ನಾ ಇಸಾಬ, ಎಸ್ಸೆಸ್ಸೆಫ್ ಗಳ ಮುಖಾಂತರ ಆಹಾರ ಕಿಟ್ ಗಳನ್ನು ಸದ್ದಿಲ್ಲದೆ ವಿತರಿಸಲಾಗಿದೆ. 

ವಿವರಿಸುತ್ತಾ ಹೋದರೆ ಇದರ ಪಟ್ಟಿ ದೀರ್ಘವಾಗಿ ಬಿಡಬಹುದು


ಇದರಲ್ಲಿರುವ ವಿಶೇಷತೆ ಏನೆಂದರೆ ಈ ಕಾರ್ಯಕರ್ತರಲ್ಲಿರುವ ನಿಷ್ಕಳಂಕತೆಯಾಗಿದೆ.

ಸೇವೆಗಳು ಇವತ್ತು ಅನೇಕ ಸಂಘಟನೆಗಳು, ರಾಜಕೀಯ ಪಕ್ಷಗಳು ಹಾಗೂ ವ್ಯಕ್ತಿಗಳು ಮಾಡುತ್ತವೆ.

ಆದರೆ ಆ ಸೇವೆಗಳು ಆಕಾಂಕ್ಷಿ ಗಳಿಗೆ ತಲುಪುವ ಮೊದಲೇ ಅದರ ಫೋಟೋಗಳು ಅಥವಾ ಅದರ ನಾಯಕರ ಫೋಟೋಗಳು ಪತ್ರಿಕೆಗಳಲ್ಲಿ,ಜಾಲತಾಣ ಗಳಲ್ಲಿ ವೈರಲಾಗಿ ಬಿಡುತ್ತವೆ.

ಇದರಿಂದಾಗಿ ಇವರ ಉದ್ದೇಶದಲ್ಲಿ ಸಂಶಯ ಮೂಡುತ್ತದೆ.

ಇವರ ಉದ್ದೇಶ ಕೇವಲ ಸೇವೆಯಾಗಿರದೆ ಗ್ರಾಮ,ಜಿಲ್ಲಾ ಪಂಚಾಯತ್ ಗಳೋ ಅಥವಾ ಅಸಂಬ್ಲಿ,ಪಾರ್ಲಿಮೆಂಟ್ ಗಳೋ ಅಥವಾ ಇತರ ಐಹಿಕ ಲಾಭಗಳು ಆಗಿರಲಿಕ್ಕೆ ಸಾಧ್ಯತೆ ಹೆಚ್ಚು.


ಆದರೆ ಇದು ಹಾಗಲ್ಲ.ಇದರಲ್ಲಿ ಯಾವುದೇ ರಾಜಕೀಯ ಪದವಿಗಳೋ ಐಹಿಕ ಲಾಭಗಳೋ ಉದ್ದೇಶವಾಗಲು ಸಾದ್ಯವೇ ಇಲ್ಲ.

ಈ ಸಂಘಟನೆಗಳ ರೂಪೀಕರಣದ ಉದ್ದೇಶವೇ ಐಹಿಕ ಸೇವೆಯ ಮೂಲಕ ಪಾರತ್ರಿಕ ಮೋಕ್ಷ ಪಡೆಯುವುದು ಮಾತ್ರವಾಗಿದೆ.

ಅದರಿಂದಾಗಿಯೇ ಇದು ಮದೀನಾ ಅನ್ಸಾರ್ ಗಳ ಸೇವೆಯನ್ನು ಸ್ವಲ್ಪ ಮಟ್ಟಿಗೆ ನೆನಪಿಸುವಂತಿದೆ ಎಂದು ಹೇಳಲು ಕಾರಣ. 

ಇವರ ಮಾದರೀ ನಾಯಕರು ಆ ಮದೀನಾದ ಅನ್ಸಾರ್ ಗಳೆಂಬ ಸಹಾಯಿಗಳಾಗಿರುತ್ತಾರೆ.


ಇದರಲ್ಲಿ ತನ್ನೆಲ್ಲಾ ಸಮಯವನ್ನು ತೊಡಗಿಸಿ ಕೊಂಡಿರುವ ಸುನ್ನೀ ಸಂಘ ಕುಟುಂಬದ ಸಕ್ರಿಯ ನಾಯಕ ಮಂಗಳೂರು ಅಶ್ರಫ್ ಕಿನಾರ ರವರು ಈದ್ ಶುಭಾಶಯ ಹೇಳಲು ಫೋನ್ ಮಾಡಿದ್ದರು.


ಸೇವೆಯ ಬರದಲ್ಲಿ ರೋಗಿಗಳ ಮಧ್ಯೆ ಓಡಾಡುವಾಗ ನಿಮ್ಮ ಸ್ವಶರೀರಗಳನ್ನು ಸಂಪೂರ್ಣ ಕಡೆಗಣಿಸದೆ ಸ್ವಲ್ಪ ಎಚ್ಚರಿಕೆಯಿಂದ ಇರಿ ಎಂದು ಹೇಳಿದಾಗ ಅವರು ಕೊಟ್ಟ ಉತ್ತರ  'ಹೆದರಬೇಕಾಗಿಲ್ಲ ನಾವು ನಿಸ್ವಾರ್ಥ ಸೇವೆ ಮಾಡುವಾಗ ನಮಗೆ ಅಲ್ಲಾಹನ ಪ್ರತ್ಯೇಕ ಸಹಾಯ ಇದ್ದೇ ಇರುತ್ತದೆ' ಎಂದಾಗಿತ್ತು


ಇದರಿಂದೆಲ್ಲಾ ಇವರ ಉದ್ದೇಶ ಶುದ್ಧಿ ಯಾರಿಗೂ ಸ್ಪಷ್ಟವಾಗುವತಂದ್ದೇ ಆಗಿರುತ್ತದೆ.


ಕರ್ನಾಟಕದ ಮುಸ್ಲಿಂ ಜಮಾಅತ್ ರೂಪೀಕರಿಸುವಾಗ ಹಲವರು ಹಲವಾರು ಸಂಶಯಗಳನ್ನು ವ್ಯಕ್ತಪಡಿಸಿದ್ದರು.

ಇದೇನು ರಾಜಕೀಯ ಪಕ್ಷವೋ ಅಥವಾ ಬೇರೇನಾದರೂ ಐಹಿಕ ಗುರಿಯಿದೆಯೇ...

ಎಂದೆಲ್ಲಾ.

ಅವರಿಗೆಲ್ಲಾ ಈಗ ಉತ್ತರ ಸಿಕ್ಕಿರ ಬಹುದು ತಾನೇ.


ಅಲ್ಲಾಹು ಈ ಸಹಾಯಿ ತಂಡ ಮತ್ತು ನಮ್ಮೆಲ್ಲಾ ಸಂಘಟೆನೆಗಳ ಕಾರ್ಯಕರ್ತರು,ನಾಯಕರ ಸೇವೆಗಳನ್ನು ಸ್ವೀಕರಿಸಿ ದೀರ್ಘಾಯುಷ್ಯ ಆಫಿಯತ್ತನ್ನು ಕರುಣಿಸಲಿ. ಅಮೀನ್

No comments:

ರಂಜಾನ್ ಪಾವನ ಮಾಸ

ರಂಜಾನ್ ಪಾವನ ಮಾಸ ನಮ್ಮಲ್ಲಿರುವ ಕೆಲವು ಕೆಟ್ಟ ಆಹಾರ ಪದ್ಧತಿಗಳನ್ನು ತೊಡೆದುಹಾಕಲು,ಹಾಗೂ ಜೊತೆಗೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಒಂದು ಅವಕಾಶವಾಗಿದೆ, ...