MUSTHAFA HASAN ALQADRI OFFICIAL : ಈ ಅನುಮಾನಗಳನ್ನು ನಿವಾರಿಸುವವರಾರು?

Translate

Sunday, August 30, 2020

ಈ ಅನುಮಾನಗಳನ್ನು ನಿವಾರಿಸುವವರಾರು?

ಈ ಅನುಮಾನಗಳನ್ನು ನಿವಾರಿಸುವವರಾರು? 
--------------------------------------
✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ 

ಕೋವಿಡ್ 19 ಸಂಬಂಧಿಸಿದಂತೆ ಎಲ್ಲವೂ ಸಡಿಲಗೊಂಡಿದೆ.
ಹಿಂದೆ ಇದ್ದ ಎಲ್ಲಾ ಬಿಗಿ ನಿಯಮಗಳೆಲ್ಲಾ ಸಡಿಲಗೊಂಡಿದೆ.ಅನುಕೂಲ ಶಾಸ್ತ್ರ ಎಂಬಂತೆ ಅನುಕೂಲಕ್ಕೆ ತಕ್ಕಂತೆ ಬದಲಾಯಿಸುತ್ತಾ ಹೋಗಲಾಗಿದೆ.
ಆದರೆ ಮೃತ ಶರೀರಗಳೊಂದಿಗೆ ತೋರುವ ಅನ್ಯಾಯದಲ್ಲಿ ಮಾತ್ರ ಯಾವುದೇ ಬದಲಾವಣೆಯಿಲ್ಲದೆ ಮುಂದುವರಿದಿದೆ.ಮೃತ ಶರೀರಗಳಿಗೆ ಧಾರ್ಮಿಕ ವಿಧಿವಿಧಾನಗಳನ್ನು ನಡೆಸುವುದರಿಂದ ಸಂಪೂರ್ಣವಾಗಿ ತಡೆಯಲಾಗಿದೆ. 
ಕೋವಿಡ್ ಹೆಸರಿನಲ್ಲಿ ಆಸ್ಪತ್ರೆಗಳಲ್ಲಿ ಮರಣ ಹೊಂದಿದರೆ ಇಲ್ಲಸಲ್ಲದ ನೆಪವೊಡ್ಡಿ ಕುಟುಂಬಸ್ಥರನ್ನು,ಬಂದು ಮಿತ್ರಾದಿಗಳನ್ನು ಸಂಪೂರ್ಣವಾಗಿ ದೂರವಿಟ್ಟು ಭಯ ಬೀತಿಯ ವಾತಾವರಣ ನಿರ್ಮಾಣ ಮಾಡಲಾಗುತ್ತದೆ.
ಮಯ್ಯಿತನ್ನು ಒಂದು ರೀತಿಯ ನಿಕ್ರೃಷ್ಟ ವಸ್ತುವಾಗಿ ಬಿಂಬಿಸಲಾಗುತ್ತಿದೆ.
ಇದು ಇವತ್ತೂ ಎಗ್ಗಿಲ್ಲದೆ ಮುಂದುವರಿಯುತ್ತಲೇ ಇದೆ.

ಇಸ್ಲಾಮಿನಲ್ಲಿ ಶುದ್ಧಿಯು ಒಬ್ಬ ಮನುಷ್ಯನ ಜೀವನದಲ್ಲಿ  ಅತ್ಯಂತ ಮುಖ್ಯವಾದ ಅವಿಭಾಜ್ಯ ಘಟಕವಾದಂತೆ
ಅವನು ಮರಣ ಹೊಂದಿದರೂ ಅವನ ಕೊನೆಯ ಯಾತ್ರೆಯಲ್ಲಿಯೂ ಅವನನ್ನು ಸಂಪೂರ್ಣ ಶುದ್ಧಿಯಿಂದಲೇ ಯಾತ್ರೆ ಕಳುಹಿಸಿ ಕೊಡಬೇಕಾದದ್ದು ಜೀವಂತವಿರುವವರ ಮೇಲೆ ಕಡ್ಡಾಯ ಎಂಬುದು ಇಸ್ಲಾಮಿನ ನಿಯಮ.
ಇದರಿಂದಾಗಿಯೇ ಮೃತ ಶರೀರವನ್ನು ಸ್ನಾನ 
ಮಾಡಿಸುವ ವಿಷಯದಲ್ಲಿ ಇಸ್ಲಾಮಿಗೆ ಅಷ್ಟೊಂದು 
ಕಠಿಣ ದಾರ್ಡ್ಯತೆಯಿರುವುದು.

ಮಾತ್ರವಲ್ಲ ಮಯ್ಯಿತ್ ಸ್ನಾನದ ರೂಪುರೇಷೆಗಳ ಬಗ್ಗೆ ಇಸ್ಲಾಮೀ ಫಿಖ್ಹ್ ಗ್ರಂಥಗಳಲ್ಲಿ ತುಂಬಿ ನಿಂತಿರುವುದು ಇದರಿಂದ ಮಾತ್ರವಾಗಿದೆ.
ಅದೂ ಅಲ್ಲದೆ ಸ್ನಾನ ಮಾಡಿಸದ ಮಯ್ಯಿತ್ ಗಳ ಮೇಲೆ ಮಯ್ಯಿತ್ ನಮಾಝೇ ಬೇಡವೆಂಬ ಪ್ರಭಲ  ಅಭಿಪ್ರಾಯಕ್ಕೆ ಅಇಮ್ಮತ್ ಗಳು ಬಂದಿರುವುದು ಜನಾಝ ಸ್ನಾನದ ಅನಿವಾರ್ಯತೆಯನ್ನು ಮತ್ತಷ್ಟು ಎತ್ತಿ ತೋರಿಸುತ್ತದೆ.
ಮಾತ್ರವಲ್ಲ ಜೀವಂತ ವ್ಯಕ್ತಿಗಳ ಸ್ನಾನಕ್ಕಿಂತಲೂ ಹೆಚ್ಚು ವಿಶಾಲವಾಗಿ ಮೃತ ವ್ಯಕ್ತಿಗಳ ಸ್ನಾನದ ನೀತಿ ನಿಯಮಗಳ ಕುರಿತು ಧಾರ್ಮಿಕ ಗ್ರಂಥಗಳಲ್ಲಿ ಚರ್ಚಿಸಿರುವುದು ಕಾಣಲು ಸಾಧ್ಯವಾಗುವುದು.

ಹೀಗಿರುವಾಗ ಕೋವಿಡ್ ಹೆಸರಲ್ಲಿ ಮಯ್ಯಿತ್ ಗಳ ಸ್ನಾನ ಮಾಡಿಸುವ ಹಕ್ಕನ್ನು ನಿಷೇದಿಸಲ್ಪಟ್ಟಿರುವುದು ಯಾವುದೇ ಕಾರಣಕ್ಕೂ ಯಾವುದೇ ಮನಸ್ಸುಗಳು ಒಪ್ಪಲು ಸಾಧ್ಯವಿಲ್ಲದ ಸಂಗತಿಯಾಗಿದೆ.

ಜೀವಂತವಿರುವಾಗ ತನ್ನ ಮೈಮೇಲೆ ಮೂತ್ರದ ಒಂದು ಸಣ್ಣ ತೊಟ್ಟು ತಾಗಿದರೆ ಅಥವಾ ಸಣ್ಣ ಯಾವುದಾದರೂ ಮಾಲಿನ್ಯವುಂಟಾದರೆ ತಕ್ಷಣ ಓಡಿಹೋಗಿ ತೊಳೆದು ಶುಚಿಗೊಳಿಸುವ ಅಥವಾ ಒಂದು ದಿನ ಸ್ನಾನ ಮಾಡಲು ಸಾಧ್ಯವಾಗದೆ ಇದ್ದಲ್ಲಿ ಮಾನಸಿಕ ನೆಮ್ಮದಿಯನ್ನೇ ಕಳೆದು ಕೊಳ್ಳುವ ವ್ಯಕ್ತಿ 
ದಿನಗಟ್ಟಲೆ,ತಿಂಗಳುಗಟ್ಟಲೆ ಐಸಿಯುವಿನಲ್ಲಿ ನರಳಿ ಮರಣ ಹೊಂದಿದರೆ ಅವನ ಶರೀರಕ್ಕೆ ಒಂದು ತೊಟ್ಟು ನೀರು ಮುಟ್ಟಿಸಲು ಅನುಮತಿಸದೆ ದಫನ ಮಾಡ ಬೇಕೆಂಬ ಈ ಕಪ್ಪು ನಿಯಮದ ಹಿಂದಿರುವ ರಹಸ್ಯವೇನು.
ಗುಪ್ತವಾಗಿ ಪ್ಲಾಸ್ಟಿಕ್ ನಲ್ಲಿ ಪ್ಯಾಕ್ ಮಾಡಿ ಮೃತ ಶರೀರಗಳನ್ನು ನೇರವಾಗಿ ಸ್ಮಶಾನಗಳಿಗೆ ತಲುಪಿಸ ಬೇಕೆಂದು ಹಠ ಹಿಡಿಯುವುದರ ಉದ್ದೇಶವಾದರೂ ಏನು.

ಸರಿ. ಆರೋಗ್ಯ ಇಲಾಖೆಯ ಒಮ್ಮತಾಬಿಪ್ರಾಯ ಪ್ರಕಾರ ಇರುವ ನಿಯಮ ಹಾಗೂ ವೈರಸ್ ವ್ಯಾಪಿಸುವುದನ್ನು ತಡೆಯಲು ಇದು ಅನಿವಾರ್ಯ ಎಂದಾದರೆ ಅದನ್ನು ಮರು ಪ್ರಶ್ನೆ ಇಲ್ಲದೆ ಒಪ್ಪಿ ಕೊಳ್ಳಬೇಕು ಎಂಬುದರಲ್ಲಿ ತರ್ಕವೇ ಇಲ್ಲ ಖಂಡಿತ.

ವ್ಯಕ್ತಿ ಮರಣ ಹೊಂದಿದರೆ ವೈರಸ್ ಉಳಿಯುವುದಿಲ್ಲ.ಮೃತ ವ್ಯಕ್ತಿಯಿಂದ ರೋಗ ಪ್ರಸರಣ ಸಾಧ್ಯತೆಯೇ ಇಲ್ಲ ಎಂದು ವೈದ್ಯರೇ ಖಂಡ ತುಂಡವಾಗಿ ಹೇಳುವಾಗ ಮತ್ಯಾಕೆ ಈ ಭಯಭೀತಿಯ ವಾತಾವರಣ ನಿರ್ಮಾಣ ಮಾಡಿ ಮೃತ ಶರೀರವನ್ನು ಅತ್ಯಂತ ನಿಕೃಷ್ಟವಾಗಿ ಕಾಣುವ ಸನ್ನಿವೇಶವನ್ನು ಸೃಷ್ಟಿ ಮಾಡಲು ಕಾರಣಕರ್ತರಾಗುವುದು ಎಂಬುದೇ ತಿಳಿಯದ ಸಂಗತಿ.

ಅಲ್ಲದೆ ಸರಿಯಾಗಿ ಅವಲೋಕನ ಮಾಡುವಾಗ ಇದೆಲ್ಲಾ ಸ್ವಯಂ ನಿರ್ಮಿತ ನಿಯಮಗಳೆಂದೇ ಅನುಮಾನ ಹುಟ್ಟುತ್ತದೆ.ಇದು ಅನುಮಾನಗಳ ಮೇಲೆ ಅನುಮಾನಗಳಿಗೆ ಕಾರಣವಾಗಿದೆ.

ಆದರೆ ಮೃತ ಶರೀರಗಳೊಂದಿಗಿನ ಈ ಬಹಿರಂಗ ಅನ್ಯಾಯದ ವಿರುದ್ಧ ಒಬ್ಬರೇ ಒಬ್ಬರು ಚಕಾರವೆತ್ತದೆ 
ಮೌನಕ್ಕೆ ಶರಣಾಗಿರುವುದು ಮಾತ್ರ ಅತ್ಯಂತ  ಅಪಾಯಕಾರಿ ಬೆಳವಣಿಗೆ ಎಂದರೆ ತಪ್ಪಾಗಲಾರದು.

ಆಯ್ತು ಅದೆಲ್ಲಾ ಬದಿಗಿಡೋಣ.
ಇನ್ನು ಮೃತ ಶರೀರಗಳ ಅಂತ್ಯಕ್ರಿಯೆಯೆಲ್ಲಿ ಸಕ್ರಿಯರಾಗಿರುವ ಸ್ವಯಂ ಸೇವಕ ಸಂಘಗಳ ಬಗ್ಗೆ ಚರ್ಚಿಸುದಾದರೆ ಅವರ ಸೇವಾ ಮನೋಭಾವವನ್ನು ಸಂಪೂರ್ಣವಾಗಿ ಮೆಚ್ಚುವುದರೊಂದಿಗೆ   
ಅವರಲ್ಲಿ ಕೆಲವರು ತೋರುವ 
ಗುರಿಕಾರ ತನವನ್ನು ಹೇಳದೆ ನಿವೃತಿಯಿಲ್ಲ.
ಪಿಪಿಇ ಕಿಟ್ ಧರಿಸಿದ ಮಾತ್ರಕ್ಕೆ ಏನೋ ಡಾಕ್ಟರೇಟ್ ಲಭಿಸಿದ ಮಟ್ಟದಲ್ಲಿ ವರ್ತಿಸುವುದು ನೋಡಿದರೆ ಅಸಹ್ಯವೆನಿಸದಿರದು.
ಮಯ್ಯಿತಿನ ಸ್ವಂತ ಅಪ್ಪಮಕ್ಕಳನ್ನು, ಅಣ್ಣತಮ್ಮಂದಿರನ್ನು ಕೂಡಾ ಹತ್ತಿರ ಸುಳಿಯದಂತೆ ತಾವೇ ಸ್ವಯಂ ನಿರ್ಮಿತ ನಿಯಮಗಳನ್ನು ಹೇರಿ ತಾವೇ ದೊಡ್ಡ ಖಾಝಿಗಳಂತೆ ನಮಾಝ್ ಗೆ ನೇತೃತ್ವ ಕೊಟ್ಟು ಕ್ಯಾಮರಾಗಳಿಗೆ ಪೋಸ್ ಕೊಡುವುದು ಯಾವ ಪುರುಷಾರ್ಥಕ್ಕಾಗಿ ಎಂದು ಒಂದಿಷ್ಟು ಚಿಂತನೆ ಮಾಡುವುದೊಳಿತು.
ಇದೆಲ್ಲಾ ನೋಡುವಾಗ ಇದು ಮಯ್ಯಿತಿನೊಂದಿಗೆ ತೋರುವ ಅತ್ಯಂತ ದೊಡ್ಡ ಅನ್ಯಾಯವೆನ್ನದಿರಲು ಸಾಧ್ಯವೇ ಇಲ್ಲ. 
ಕೇವಲ ಕೊರೋನ ಎಂಬ ಕಾಯಿಲೆಗೆ ತುತ್ತಾಗಿ ಮರಣ ಹೊಂದಿದ ಏಕಮಾತ್ರ ಕಾರಣಕ್ಕೆ ಈ ಮಯ್ಯಿತ್ ಅನುಭವಿಸಿದ ಯಾತನೆಗಳೆಷ್ಟು.
ಅಗತ್ಯವಿದ್ದೋ ಅಗತ್ಯವಿಲ್ಲದೆಯೋ ದಿನಗಟ್ಟಲೆ ಐಸಿಯುವಿನಲ್ಲಿ ಅಲ್ಲಿನ ಸಿಬ್ಬಂದಿಗಳ ಸ್ವಯಂ ನಿರ್ಮಿತ ನಿಯಮಗಳ ಮದ್ಯೆ ನರಳಾಟ. ಮರಣಹೊಂದಿದ ನಂತರ ಶವಾಗಾರದಲ್ಲಿ ಗಂಟೆಗಟ್ಟಲೆ ಆಸ್ಪತ್ರೆ ಅಧಿಕಾರಿಗಳ ಸ್ವಯಂ ನಿರ್ಮಿತ ನಿಯಮಗಳು. ಅಲ್ಲಿಂದ ಆಂಬುಲೆನ್ಸ್ ನ ಸ್ವಯಂ ನಿರ್ಮಿತ ನಿಯಮಗಳು.
ಕೊನೆಯದಾಗಿ ಈಗ ಈ ಸ್ವಯಂ ಸೇವಾ ಸಂಘಗಳ ಸ್ವಯಂ ನಿರ್ಮಿತ ನಿಯಮಗಳು.

ಇದು ಹೇಳುವಾಗ ಯಾರೂ ಹೆಗಲು ಮುಟ್ಟಿ ನೋಡ ಬೇಕಾಗಿಲ್ಲ.ಮೊನ್ನೆ ಒಂದು ಸಹೋದರಿಯ ಮಯ್ಯಿತನ್ನು ಸ್ವಂತ ತಮ್ಮನಿಗೆ ತೋರಿಸುವ ರೀತಿ ನೋಡಿದಾಗ ಬಹಳ ಅಸಹ್ಯವೆನಿಸಿತು.ಯಾಕೆ ಈ ರೀತಿ ಸುಖಾ ಸುಮ್ಮನೆ ನಿಯಮಗಳನ್ನು ಹೇರಿ ಭೀತಿ ಹುಟ್ಟಿಸುವುದು ಎಂದು ತಿಳಿಯುವುದಿಲ್ಲ.

ಸಂಘಟನೆಗಳು ಯಾವುದೇ ಆಗಿರಲಿ. 
ಪಿಪಿಇ ಕಿಟ್ ಧರಿಸಿ ಮಯ್ಯಿತನ್ನು ದಫನ ಮಾಡಿದ ಮಾತ್ರಕ್ಕೆ ದೊಡ್ಡ ಮಹಾ ಸಾದನೆಗಳನ್ನು ಮಾಡಿದಂತೆ ವರ್ತಿಸುವ ನಿಮ್ಮಲ್ಲಿ ಕೇಳಲಿಕ್ಕಿರುವುದು ಯಾವತ್ತಾದರೂ ಈ ಅಲಿಖಿತ ನಿಯಮಗಳ ಕುರಿತು ಚಿಂತಿಸಿದ್ದೀರೋ.
ಅಥವಾ ಅದರ ಕುರಿತು ಎಲ್ಲಿಯಾದರೂ ಚಕಾರವೆತ್ತಿದ್ದೀರೋ.
ಒಂದು ವೇಳೆ ಅದಕ್ಕೆ ಬೇಕಾಗಿ ಹೋರಾಟ ಮಾಡಿ ಬೇಡಿಕೆಗಳು ಈಡೇರಿಲ್ಲ ಎಂದಾದರೆ ಅದು ಬೇರೆ ವಿಷಯ.
ಅದ್ಯಾವುದೂ ಮಾಡದೆ ನಿಮ್ಮ ಈ ವರ್ತನೆಗಳು ಸಹಿಸಲಾಗದು.ಯಾವಾಗಲೂ ಸಂಘಟನೆಗಳ ಹೋರಾಟ ಅನ್ಯಾಯಗಳ ವಿರುದ್ಧ ಹಾಗೂ ನಿಷೇದಿಸಲ್ಪಟ್ಟ ಹಕ್ಕುಗಳನ್ನು ಸಂವಿಧಾನಾತ್ಮಕವಾಗಿ ಪಡೆಯಲಿಕ್ಕಾಗಿರ ಬೇಕು.ಅಲ್ಲದೆ ಕೇವಲ ತೋರಿಕೆಯ ನಾಟಕಗಳಾಗಬಾರದು.

No comments:

ರಂಜಾನ್ ಪಾವನ ಮಾಸ

ರಂಜಾನ್ ಪಾವನ ಮಾಸ ನಮ್ಮಲ್ಲಿರುವ ಕೆಲವು ಕೆಟ್ಟ ಆಹಾರ ಪದ್ಧತಿಗಳನ್ನು ತೊಡೆದುಹಾಕಲು,ಹಾಗೂ ಜೊತೆಗೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಒಂದು ಅವಕಾಶವಾಗಿದೆ, ...