MUSTHAFA HASAN ALQADRI OFFICIAL : ಎಡವಿದ್ದು ನಿಜ.ಅದೆಲ್ಲಿ?

Translate

Tuesday, August 11, 2020

ಎಡವಿದ್ದು ನಿಜ.ಅದೆಲ್ಲಿ?


ಅತ್ಯುತ್ತಮ ವಿದ್ಯೆ ಕಲಿಯಲು ಅನುಕೂಲವಾಗುವ ಕನ್ನಡದಲ್ಲಿರುವ ಈ ತರಗತಿಯು ಅತ್ಯಂತ ಉಪಯುಕ್ತವಾಗಿದೆ.

ಆದರೂ ಐದು ನಿಮಿಷ ಸಮಯ ಮಾತ್ರ ಬಹಳ ಕಡಿಮೆಯಾಯ್ತು ಎಂಬ ವೀಕ್ಷಕರ ಬೇಡಿಕೆಯನ್ನು ಅನುಸರಿಸಿ ತರಗತಿಗಳ ಸಮಯವನ್ನು ಹೆಚ್ಚುಗೊಳಿಸಲಾಗಿದೆ.

ತಪ್ಪದೆ ಎಲ್ಲಾ ತರಗತಿಗಳನ್ನು ಕೇಳಿ ಕಳಿತು ವಿದ್ಯಾ ಸಂಪನ್ನರಾಗಲು ಪ್ರಯತ್ನ ಪಡಬೇಕು.ಅಲ್ಲಾಹು ಅನುಗ್ರಹಿಸಲಿ.ಆಮೀನ್.

 PP usthad: ಎಡವಿದ್ದು ನಿಜ.ಅದೆಲ್ಲಿ?

___________


✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ

____________


ಹಿಂದಿನ ತಲೆಮಾರಿಗಿದ್ದ ಏನೋ ಒಂದನ್ನು ಇವತ್ತಿನ 

ತಲೆಮಾರು ಕಳೆದು ಕೊಂಡಿರುವುದು ನಿಜ. 

ಅದೇನೆಂದು ಚಿಂತಿಸಿ ಮರಳಿ ಪಡೆಯದೆ ಸಮಸ್ಯೆಗಳ ಸುಳಿಯಿಂದ ಪಾರಾಗಲು ಸಾಧ್ಯವಿಲ್ಲ ಖಂಡಿತ.

ಅದು ಸಂಪತ್ತೋ ರಾಜಕೀಯವೋ ಬಲಾಢ್ಯತೆಯೋ

ಬೇರೆ ಯಾವುದೇ ಸ್ವಾಧೀನಗಳೋ ಅಲ್ಲ.


ಅದು ಮನುಷ್ಯನ ಹೃದಯಕ್ಕೆ ಸಂಬಂಧಿಸಿದ ಆಧ್ಯಾತ್ಮಿಕ ಚಿಂತನೆ ಮಾತ್ರವಾಗಿದೆ.


ಇವತ್ತು ಮನುಷ್ಯ ಮನಸ್ಸುಗಳು ತೀರಾ ಮಲಿನಗೊಂಡು ನಾರುತ್ತಿದ್ದು ಅಸಹ್ಯ ಹುಟ್ಟಿಸುವ ಮಟ್ಟಕ್ಕೆ ತಲುಪಿದೆ.

ಇದರಿಂದ ಮಾನವೀಯ ಮೌಲ್ಯಗಳೆಲ್ಲಾ ಸಂಪೂರ್ಣ ಮಾಯವಾಗಿ ಮನುಷ್ಯನು ಮೃಗ ಸಮಾನನಾಗಿ ಜೀವಿಸುವ ಅಪಾಯ ಬಂದೊದಗಿದೆ.

ಅದ್ದರಿಂದಲೇ ಈ ಆಧ್ಯಾತ್ಮಿಕ ಚಿಂತನೆಯ ಬಗ್ಗೆ ಚಿಂತನೆ ಅನಿವಾರ್ಯವಾಗಿದೆ.


ಏನಿದು ಆಧ್ಯಾತ್ಮಿಕ ಚಿಂತನೆ.?


ಅದು ಬೇರೇನೂ ಅಲ್ಲ.ಸೃಷ್ಟಿಕರ್ತನಾದ ಅಲ್ಲಾಹನನ್ನು ಹೃದಯದಿಂದ ದರ್ಶಿಸುವುದಾಗಿದೆ ಆದ್ಯಾತ್ಮಿಕತೆ.

ಅದು ಶರೀಅತ್,ತ್ವರೀಖತ್ ಗಳಲ್ಲಿ ಪಯಣಿಸಿ ಹಖೀಖತ್ ಮಅರಿಫತಿನಲ್ಲಿ ಪರ್ಯವಸಾನಗೊಳ್ಳುತ್ತದೆ. ಹೃದಯವು ಅಲ್ಲಾಹನೊಂದಿಗೆ ಸಂಪರ್ಕ ಸಾಧಿಸುವ ಮಹೋನ್ನತ ಪದವಿಯೇ ಮಅರಿಫತ್.


ಈ ಪಯಣಕ್ಕೆ ತಸವ್ವುಫ್ ಎಂದೂ ಪಯಣಿಗನಿಗೆ ಸೂಫೀ ಎನ್ನಲಾಗುತ್ತದೆ.ಈ ಸೂಫೀ ಚಿಂತನೆಯಾಗಿದೆ ಇಸ್ಲಾಮಿನ ನೈಜತೆ.

ಈ ಮಾರ್ಗದಲ್ಲಿ ಮನುಷ್ಯನನ್ನು ಕೊಂಡೊಯ್ಯುವ ಮಾರ್ಗದರ್ಶಿಗಳೇ ತ್ವರೀಖತಿನ ಮಷಾಇಖ್ ಗಳು.

ಶರೀಅತಿನಲ್ಲಿ ಎಚ್ಚರಿಕೆ ವಹಿಸಿ ಸುಲೂಕ್ ಪ್ರಯಾಣದಲ್ಲಿ ಏರ್ಪಟ್ಟು ಅವನು ಮುಂದುವರಿಯುತ್ತಿದ್ದಂತೆಯೇ ಮನುಷ್ಯನ ಹೃದಯವು ಶುದ್ಧವಾಗುತ್ತಾ ಹೋಗುತ್ತದೆ.

ಹೃದಯವು ಪರಿಪೂರ್ಣ ಶುದ್ಧಿ ಪ್ರಾಪ್ತಿಯಾಗುವಾಗ ಆ ಹೃದಯವು ಅಲ್ಲಾಹನ ಪವಿತ್ರ ಸಂಪರ್ಕ ಸ್ಥಾಪಿಸಿ ನೂರುತ್ತಜಲ್ಲಿಯನ್ನು ದರ್ಶಿಸಲು ಸನ್ನದ್ಧವಾಗುತ್ತದೆ.

ತಸವ್ವುಫಿನಲ್ಲಿ ಮನುಷ್ಯನ ಹೃದಯ ಮುಖ್ಯವೆನಿಸುತ್ತದೆಯೇ ಹೊರತು ಕ್ರಿಯೆಗಳೋ ವೇಷ ಭೂಷಣಗಳಲ್ಲ.


ಎಲ್ಲೇ ಇರಲಿ ಹೇಗೇ ಇರಲಿ ಹೃದಯದಲ್ಲಿ ಮಾತ್ರ ಇಲಾಹೀ ಚಿಂತನೆ ತಪ್ಪಿಹೋಗದಂತೆ ಜಾಗೃತೆ ವಹಿಸಿ ಕೊಳ್ಳುವುದೇ ನಿಜವಾದ ತಸವ್ವುಫ್.


ಅಲ್ಲದೆ ವಿವಿಧ ರೋಗಗಳಿಂದ ರೋಗಗ್ರಸ್ತವಾದ ಹೃದಯಗಳನ್ನಿಟ್ಟು ಕೊಂಡವರಿಗೆ ತಸವ್ವುಫಿನ ಗಂಧಗಾಳಿ ಬೀಸಲೂ ಸಾಧ್ಯವಿಲ್ಲ. 

ಹಾಗೂ ಸೂಫಿಯಾಗಲು ಖಂಡಿತ ಸಾಧ್ಯವಿಲ್ಲ.


ಇನ್ನು ಕೆಲವರು ಭಾವಿಸಿದಂತೆ ಶರೀಅತಿನ ನಯಮಗಳೆನ್ನೆಲ್ಲಾ ಗಾಳಿಗೆ ತೂರಿ ವೇಷಭೂಷಣಗಳಲ್ಲಿ

ಸೂಫೀ ವೇಷ ಕಟ್ಟುವುದೂ ಅಲ್ಲ.

ಅಥವಾ ಆಖಿರತಿನ ಹೆಸರು ಹೇಳಿ ಇಹಲೋಕದ ಎಲ್ಲಾ ವ್ಯವಸ್ಥೆಗಳನ್ನು ತ್ಯಜಿಸುವುದೂ ಅಲ್ಲ.

ತಸವ್ವುಫಿನ ಹೆಸರು ಹೇಳಿ ಇಹಲೋಕದ ಸುಖಸೌಕರ್ಯಗಳಲ್ಲಿ ಅತಿಯಾಗಿ 

ಏರ್ಪಡುವುದೂ ಅಲ್ಲ.


ದುನ್ಯಾಗೆ ಬೇಕಾಗಿ ಆಖಿರತನ್ನು ಉಪೇಕ್ಷಿಸುವವನಾಗಲಿ ಆಖಿರತಿಗೆ ಬೇಕಾಗಿ ದುನ್ಯಾವನ್ನು ಸಂಪೂರ್ಣ ಉಪೇಕ್ಷಿಸುವವನಾಗಲಿ ಸತ್ಯವಿಶ್ವಾಸಿಯಾಗಲು ಸಾಧ್ಯವೇ ಇಲ್ಲ.


 واعمل لدنياك كانك تعيش ابدا  واعمل لاخرتك كانك تموت غدا


ದುನ್ಯಾದ ಕಾರ್ಯಗಳಲ್ಲಿ ಏರ್ಪಡುವಾಗ ಇದು ಶಾಶ್ವತ ಎಂದು ಭಾವಿಸಿ ಅದನ್ನು ಬಹಳ ಅಚ್ಚುಕಟ್ಟಾಗಿಯೇ ನಿರ್ವಹಿಸಬೇಕು.

ಆಖಿರತಿನ ವಿಷಯಗಳಲ್ಲಿ ಏರ್ಪಡುವಾಗ ಸದ್ಯದಲ್ಲೇ ನಾನು ಮರಣಹೊಂದಲಿದ್ದು ಅದಕ್ಕಾಗಿ ಬಹಳ ನಿಸ್ವಾರ್ಥವಾಗಿ ಇದನ್ನು ನಿರ್ವಹಿಸಬೇಕೆಂಬ ಭಾವನೆಯಿರಬೇಕು ಎಂದಾಗಿದೆ ತಾತ್ಪರ್ಯ.

ಎಷ್ಟೊಂದು ಅರ್ಥಪೂರ್ಣ ಮಾತು.


ಎಲ್ಲಾ ವಿಷಯಗಳಲ್ಲಿ ನಕಲಿಗಳು ತುಂಬಿ ಗೊಂದಲದ ಗೂಡಾಗಿ ವ್ಯವಸ್ಥೆಗಳೆಲ್ಲಾ ಅವ್ಯವಸ್ಥೆಯ ಆಗರವಾಗಿರುವ  ಇಂದಿನ ಸನ್ನಿವೇಶದಲ್ಲಿ ಮೇಲಿನ ಮಾತು ಬಹಳ ಬಹಳ ಚಿಂತನಾರ್ಹವಾಗಿದೆ.


ಆದ್ದರಿಂದಲೇ ತಸವ್ವುಫ್ ಕೂಡಾ ಗೊಂದಲಗೊಳ್ಳದಂತೆ ಜಾಗೃತೆ ಪಾಲಿಸಬೇಕಾದ ಅಗತ್ಯವಿದೆ. 

ತಸವ್ವುಫ್ ಹೃದಯದಿಂದ ಇಲಾಹೀ ಚಿಂತನೆ ಪ್ರಾರಂಭಗೊಂಡು ಅದು ಬಲಗೊಳ್ಳುತ್ತಾ ಮಅರಿಫತಿನಲ್ಲಿ ಕೊನೆಗೊಳ್ಳುತ್ತದೆ. ಇಲ್ಲಿಯೆಲ್ಲಾ ಹೃದಯ ಕೇಂದ್ರೀಕೃತ ಪರಮ ಶ್ರದ್ಧೆ ಅತ್ಯಗತ್ಯವಾಗಿದೆ.


أَلَا وَإِنَّ فِي الْجَسَدِ مُضْغَةً إِذَا صَلَحَتْ صَلَحَ الْجَسَدُ كُلُّهُ، وَإِذَا فَسَدَتْ فَسَدَ الْجَسَدُ كُلُّهُ، أَلَا وَهِيَ الْقَلْبُ


ಅರಿಯಿರಿ. ಮನುಷ್ಯ ಶರೀರದಲ್ಲಿ ಒಂದು ಮಾಂಸ ತುಂಡಿದೆ.ಅದು ಉತ್ತಮವಾದರೆ ಮನುಷ್ಯ ಶರೀರ ಸಕಲವೂ ಉತ್ತಮವಾಗುತ್ತದೆ.ಅದು ಕೆಟ್ಟು ಬಿಟ್ಟರೆ ಶರೀರ ಸಕಲವೂ ಕೆಟ್ಟು ಬಿಡುತ್ತದೆ.ಅರಿಯಿರಿ ಅದು ಮನುಷ್ಯನ ಹೃದಯ ವಾಗಿರುತ್ತದೆ.


ಹೃದಯವನ್ನು ಶುದ್ಧವಾಗಿಡುವುದೇ ಆಧ್ಯಾತ್ಮಿಕತೆ.

ಮನುಷ್ಯನ ಹೃದಯಕ್ಕೆ ಬಾಧಿಸುವ ಅನೇಕ ರೋಗಗಳಿವೆ.ಆ ರೋಗಗಳಿಂದೆಲ್ಲಾ ಹೃದಯವನ್ನು ಕಾಪಾಡಿ ಸಂರಕ್ಷಿಸುವುದು ಸ್ವಲ್ಪ ಪ್ರಯಾಸಕರ ಸಂಗತಿಯಾದರೂ ಅದು ಮನುಷ್ಯನ ಇಹಲೋಕದ ಸುಖಕರವಾದ ಜೀವನ 

ಹಾಗೂ ಪರಲೋಕದ ವಿಜಯೀ ಜೀವನಕ್ಕೆ ಅತ್ಯನಿವಾರ್ಯವಾಗಿದೆ.


ಮನುಷ್ಯನ ದೇಹಕ್ಕೆ ಅನೇಕ ಮಾರಕ ರೋಗಗಳು ಬಾಧಿಸಿ ದೇಹವನ್ನು ನಾಶಮಾಡಿ ಬಿಡುವಂತೆ ಹೃದಯಕ್ಕೂ ಅನೇಕ ಮಾರಕ ರೋಗಗಳು ಬಾಧಿಸಿ ಮನುಷ್ಯ ದೇಹ ಹಾಗೂ ಹೃದಯಗಳನ್ನು ಒಂದೇ ರೀತಿ ನಾಶ ಮಾಡಿ ಬಿಡುತ್ತವೆ.

ಅಂತಹ ಅನೇಕ ರೋಗಗಳಲ್ಲಿ ಅತಿಮಾರಕವಾದ ರೋಗಗಳಾಗಿವೆ ಅಹಂಕಾರ,ಅಸೂಯೆ,ಹಗೆತನ,ಮುಂತಾದವುಗಳು.

ಅದರಲ್ಲೂ ಅತಿಮಾರಕವಾದ ರೋಗ ಅಹಂಕಾರವಾಗಿದೆ.


ಈ ಅಹಂಕಾರದ ಬಗ್ಗೆ ವಿದ್ವಾಂಸರೆಲ್ಲಾ ಹೇಳಿರುವುದು


داء عضال


ಅಂದರೆ ಮಹಾಮಾರಕ ರೋಗ ಎಂದಾಗಿದೆ.


ಇದರಿಂದಾಗಿಯೇ ನೆಬಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಅಹಂಕಾರಿ ಸ್ವರ್ಗ ಪ್ರವೇಶಿಸಲಾರ ಎಂದು ಹೇಳದೆ ಅಹಂಕಾರದ ಒಂದು ಅಣುಆಂಶ ಹೃದಯದಲ್ಲಿದ್ದರೆ ಸ್ವರ್ಗ ಪ್ರವೇಶಿಸಲಾರ ಎಂದು ಹೇಳಿರುವುದು.


ಆದ್ದರಿಂದ ತಸವ್ವುಫಿನಲ್ಲಿ ಮುಖ್ಯವೆನಿಸುವುದು ಮನುಷ್ಯನ ಹೃದಯವಾಗಿರುತ್ತದೆ.ಅಲ್ಲಿ ವೇಷಭೂಷಣಗಳಾಗಲೀ ಪ್ರವೃತಿಗಳಾಗಲೀ ಮುಖ್ಯವೆನಿಸುವುದೇ ಇಲ್ಲ.ಅದೆಲ್ಲಾ ಹೃದಯದ ಹಿಂಬಾಲಕರಾಗಿಯೇ ಇರುತ್ತವೆ.

ಇದರಿಂದಾಗಿಯೇ ತಸವ್ವುಫಿನ ಮಷಾಇಖ್ ಗಳು ಯಾವಾಗಲೂ ತಮ್ಮ ಮುರೀದ್ ಗಳ ಹೃದಯವನ್ನು ನಿಯಂತ್ರಿಸುವುದರಲ್ಲಿಯೇ ಮಗ್ನರಾಗುವುದು.


ಹಾಗಾದರೆ ಈ ಹೃದಯವನ್ನು ಹೇಗೆ ನಿಯಂತ್ರಿಸಬಹುದು.


ಮುಂದು ವರಿಯುವುದು.....

No comments:

ರಂಜಾನ್ ಪಾವನ ಮಾಸ

ರಂಜಾನ್ ಪಾವನ ಮಾಸ ನಮ್ಮಲ್ಲಿರುವ ಕೆಲವು ಕೆಟ್ಟ ಆಹಾರ ಪದ್ಧತಿಗಳನ್ನು ತೊಡೆದುಹಾಕಲು,ಹಾಗೂ ಜೊತೆಗೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಒಂದು ಅವಕಾಶವಾಗಿದೆ, ...