MUSTHAFA HASAN ALQADRI OFFICIAL : August 2020

Translate

Sunday, August 30, 2020

ಈ ಅನುಮಾನಗಳನ್ನು ನಿವಾರಿಸುವವರಾರು?

ಈ ಅನುಮಾನಗಳನ್ನು ನಿವಾರಿಸುವವರಾರು? 
--------------------------------------
✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ 

ಕೋವಿಡ್ 19 ಸಂಬಂಧಿಸಿದಂತೆ ಎಲ್ಲವೂ ಸಡಿಲಗೊಂಡಿದೆ.
ಹಿಂದೆ ಇದ್ದ ಎಲ್ಲಾ ಬಿಗಿ ನಿಯಮಗಳೆಲ್ಲಾ ಸಡಿಲಗೊಂಡಿದೆ.ಅನುಕೂಲ ಶಾಸ್ತ್ರ ಎಂಬಂತೆ ಅನುಕೂಲಕ್ಕೆ ತಕ್ಕಂತೆ ಬದಲಾಯಿಸುತ್ತಾ ಹೋಗಲಾಗಿದೆ.
ಆದರೆ ಮೃತ ಶರೀರಗಳೊಂದಿಗೆ ತೋರುವ ಅನ್ಯಾಯದಲ್ಲಿ ಮಾತ್ರ ಯಾವುದೇ ಬದಲಾವಣೆಯಿಲ್ಲದೆ ಮುಂದುವರಿದಿದೆ.ಮೃತ ಶರೀರಗಳಿಗೆ ಧಾರ್ಮಿಕ ವಿಧಿವಿಧಾನಗಳನ್ನು ನಡೆಸುವುದರಿಂದ ಸಂಪೂರ್ಣವಾಗಿ ತಡೆಯಲಾಗಿದೆ. 
ಕೋವಿಡ್ ಹೆಸರಿನಲ್ಲಿ ಆಸ್ಪತ್ರೆಗಳಲ್ಲಿ ಮರಣ ಹೊಂದಿದರೆ ಇಲ್ಲಸಲ್ಲದ ನೆಪವೊಡ್ಡಿ ಕುಟುಂಬಸ್ಥರನ್ನು,ಬಂದು ಮಿತ್ರಾದಿಗಳನ್ನು ಸಂಪೂರ್ಣವಾಗಿ ದೂರವಿಟ್ಟು ಭಯ ಬೀತಿಯ ವಾತಾವರಣ ನಿರ್ಮಾಣ ಮಾಡಲಾಗುತ್ತದೆ.
ಮಯ್ಯಿತನ್ನು ಒಂದು ರೀತಿಯ ನಿಕ್ರೃಷ್ಟ ವಸ್ತುವಾಗಿ ಬಿಂಬಿಸಲಾಗುತ್ತಿದೆ.
ಇದು ಇವತ್ತೂ ಎಗ್ಗಿಲ್ಲದೆ ಮುಂದುವರಿಯುತ್ತಲೇ ಇದೆ.

ಇಸ್ಲಾಮಿನಲ್ಲಿ ಶುದ್ಧಿಯು ಒಬ್ಬ ಮನುಷ್ಯನ ಜೀವನದಲ್ಲಿ  ಅತ್ಯಂತ ಮುಖ್ಯವಾದ ಅವಿಭಾಜ್ಯ ಘಟಕವಾದಂತೆ
ಅವನು ಮರಣ ಹೊಂದಿದರೂ ಅವನ ಕೊನೆಯ ಯಾತ್ರೆಯಲ್ಲಿಯೂ ಅವನನ್ನು ಸಂಪೂರ್ಣ ಶುದ್ಧಿಯಿಂದಲೇ ಯಾತ್ರೆ ಕಳುಹಿಸಿ ಕೊಡಬೇಕಾದದ್ದು ಜೀವಂತವಿರುವವರ ಮೇಲೆ ಕಡ್ಡಾಯ ಎಂಬುದು ಇಸ್ಲಾಮಿನ ನಿಯಮ.
ಇದರಿಂದಾಗಿಯೇ ಮೃತ ಶರೀರವನ್ನು ಸ್ನಾನ 
ಮಾಡಿಸುವ ವಿಷಯದಲ್ಲಿ ಇಸ್ಲಾಮಿಗೆ ಅಷ್ಟೊಂದು 
ಕಠಿಣ ದಾರ್ಡ್ಯತೆಯಿರುವುದು.

ಮಾತ್ರವಲ್ಲ ಮಯ್ಯಿತ್ ಸ್ನಾನದ ರೂಪುರೇಷೆಗಳ ಬಗ್ಗೆ ಇಸ್ಲಾಮೀ ಫಿಖ್ಹ್ ಗ್ರಂಥಗಳಲ್ಲಿ ತುಂಬಿ ನಿಂತಿರುವುದು ಇದರಿಂದ ಮಾತ್ರವಾಗಿದೆ.
ಅದೂ ಅಲ್ಲದೆ ಸ್ನಾನ ಮಾಡಿಸದ ಮಯ್ಯಿತ್ ಗಳ ಮೇಲೆ ಮಯ್ಯಿತ್ ನಮಾಝೇ ಬೇಡವೆಂಬ ಪ್ರಭಲ  ಅಭಿಪ್ರಾಯಕ್ಕೆ ಅಇಮ್ಮತ್ ಗಳು ಬಂದಿರುವುದು ಜನಾಝ ಸ್ನಾನದ ಅನಿವಾರ್ಯತೆಯನ್ನು ಮತ್ತಷ್ಟು ಎತ್ತಿ ತೋರಿಸುತ್ತದೆ.
ಮಾತ್ರವಲ್ಲ ಜೀವಂತ ವ್ಯಕ್ತಿಗಳ ಸ್ನಾನಕ್ಕಿಂತಲೂ ಹೆಚ್ಚು ವಿಶಾಲವಾಗಿ ಮೃತ ವ್ಯಕ್ತಿಗಳ ಸ್ನಾನದ ನೀತಿ ನಿಯಮಗಳ ಕುರಿತು ಧಾರ್ಮಿಕ ಗ್ರಂಥಗಳಲ್ಲಿ ಚರ್ಚಿಸಿರುವುದು ಕಾಣಲು ಸಾಧ್ಯವಾಗುವುದು.

ಹೀಗಿರುವಾಗ ಕೋವಿಡ್ ಹೆಸರಲ್ಲಿ ಮಯ್ಯಿತ್ ಗಳ ಸ್ನಾನ ಮಾಡಿಸುವ ಹಕ್ಕನ್ನು ನಿಷೇದಿಸಲ್ಪಟ್ಟಿರುವುದು ಯಾವುದೇ ಕಾರಣಕ್ಕೂ ಯಾವುದೇ ಮನಸ್ಸುಗಳು ಒಪ್ಪಲು ಸಾಧ್ಯವಿಲ್ಲದ ಸಂಗತಿಯಾಗಿದೆ.

ಜೀವಂತವಿರುವಾಗ ತನ್ನ ಮೈಮೇಲೆ ಮೂತ್ರದ ಒಂದು ಸಣ್ಣ ತೊಟ್ಟು ತಾಗಿದರೆ ಅಥವಾ ಸಣ್ಣ ಯಾವುದಾದರೂ ಮಾಲಿನ್ಯವುಂಟಾದರೆ ತಕ್ಷಣ ಓಡಿಹೋಗಿ ತೊಳೆದು ಶುಚಿಗೊಳಿಸುವ ಅಥವಾ ಒಂದು ದಿನ ಸ್ನಾನ ಮಾಡಲು ಸಾಧ್ಯವಾಗದೆ ಇದ್ದಲ್ಲಿ ಮಾನಸಿಕ ನೆಮ್ಮದಿಯನ್ನೇ ಕಳೆದು ಕೊಳ್ಳುವ ವ್ಯಕ್ತಿ 
ದಿನಗಟ್ಟಲೆ,ತಿಂಗಳುಗಟ್ಟಲೆ ಐಸಿಯುವಿನಲ್ಲಿ ನರಳಿ ಮರಣ ಹೊಂದಿದರೆ ಅವನ ಶರೀರಕ್ಕೆ ಒಂದು ತೊಟ್ಟು ನೀರು ಮುಟ್ಟಿಸಲು ಅನುಮತಿಸದೆ ದಫನ ಮಾಡ ಬೇಕೆಂಬ ಈ ಕಪ್ಪು ನಿಯಮದ ಹಿಂದಿರುವ ರಹಸ್ಯವೇನು.
ಗುಪ್ತವಾಗಿ ಪ್ಲಾಸ್ಟಿಕ್ ನಲ್ಲಿ ಪ್ಯಾಕ್ ಮಾಡಿ ಮೃತ ಶರೀರಗಳನ್ನು ನೇರವಾಗಿ ಸ್ಮಶಾನಗಳಿಗೆ ತಲುಪಿಸ ಬೇಕೆಂದು ಹಠ ಹಿಡಿಯುವುದರ ಉದ್ದೇಶವಾದರೂ ಏನು.

ಸರಿ. ಆರೋಗ್ಯ ಇಲಾಖೆಯ ಒಮ್ಮತಾಬಿಪ್ರಾಯ ಪ್ರಕಾರ ಇರುವ ನಿಯಮ ಹಾಗೂ ವೈರಸ್ ವ್ಯಾಪಿಸುವುದನ್ನು ತಡೆಯಲು ಇದು ಅನಿವಾರ್ಯ ಎಂದಾದರೆ ಅದನ್ನು ಮರು ಪ್ರಶ್ನೆ ಇಲ್ಲದೆ ಒಪ್ಪಿ ಕೊಳ್ಳಬೇಕು ಎಂಬುದರಲ್ಲಿ ತರ್ಕವೇ ಇಲ್ಲ ಖಂಡಿತ.

ವ್ಯಕ್ತಿ ಮರಣ ಹೊಂದಿದರೆ ವೈರಸ್ ಉಳಿಯುವುದಿಲ್ಲ.ಮೃತ ವ್ಯಕ್ತಿಯಿಂದ ರೋಗ ಪ್ರಸರಣ ಸಾಧ್ಯತೆಯೇ ಇಲ್ಲ ಎಂದು ವೈದ್ಯರೇ ಖಂಡ ತುಂಡವಾಗಿ ಹೇಳುವಾಗ ಮತ್ಯಾಕೆ ಈ ಭಯಭೀತಿಯ ವಾತಾವರಣ ನಿರ್ಮಾಣ ಮಾಡಿ ಮೃತ ಶರೀರವನ್ನು ಅತ್ಯಂತ ನಿಕೃಷ್ಟವಾಗಿ ಕಾಣುವ ಸನ್ನಿವೇಶವನ್ನು ಸೃಷ್ಟಿ ಮಾಡಲು ಕಾರಣಕರ್ತರಾಗುವುದು ಎಂಬುದೇ ತಿಳಿಯದ ಸಂಗತಿ.

ಅಲ್ಲದೆ ಸರಿಯಾಗಿ ಅವಲೋಕನ ಮಾಡುವಾಗ ಇದೆಲ್ಲಾ ಸ್ವಯಂ ನಿರ್ಮಿತ ನಿಯಮಗಳೆಂದೇ ಅನುಮಾನ ಹುಟ್ಟುತ್ತದೆ.ಇದು ಅನುಮಾನಗಳ ಮೇಲೆ ಅನುಮಾನಗಳಿಗೆ ಕಾರಣವಾಗಿದೆ.

ಆದರೆ ಮೃತ ಶರೀರಗಳೊಂದಿಗಿನ ಈ ಬಹಿರಂಗ ಅನ್ಯಾಯದ ವಿರುದ್ಧ ಒಬ್ಬರೇ ಒಬ್ಬರು ಚಕಾರವೆತ್ತದೆ 
ಮೌನಕ್ಕೆ ಶರಣಾಗಿರುವುದು ಮಾತ್ರ ಅತ್ಯಂತ  ಅಪಾಯಕಾರಿ ಬೆಳವಣಿಗೆ ಎಂದರೆ ತಪ್ಪಾಗಲಾರದು.

ಆಯ್ತು ಅದೆಲ್ಲಾ ಬದಿಗಿಡೋಣ.
ಇನ್ನು ಮೃತ ಶರೀರಗಳ ಅಂತ್ಯಕ್ರಿಯೆಯೆಲ್ಲಿ ಸಕ್ರಿಯರಾಗಿರುವ ಸ್ವಯಂ ಸೇವಕ ಸಂಘಗಳ ಬಗ್ಗೆ ಚರ್ಚಿಸುದಾದರೆ ಅವರ ಸೇವಾ ಮನೋಭಾವವನ್ನು ಸಂಪೂರ್ಣವಾಗಿ ಮೆಚ್ಚುವುದರೊಂದಿಗೆ   
ಅವರಲ್ಲಿ ಕೆಲವರು ತೋರುವ 
ಗುರಿಕಾರ ತನವನ್ನು ಹೇಳದೆ ನಿವೃತಿಯಿಲ್ಲ.
ಪಿಪಿಇ ಕಿಟ್ ಧರಿಸಿದ ಮಾತ್ರಕ್ಕೆ ಏನೋ ಡಾಕ್ಟರೇಟ್ ಲಭಿಸಿದ ಮಟ್ಟದಲ್ಲಿ ವರ್ತಿಸುವುದು ನೋಡಿದರೆ ಅಸಹ್ಯವೆನಿಸದಿರದು.
ಮಯ್ಯಿತಿನ ಸ್ವಂತ ಅಪ್ಪಮಕ್ಕಳನ್ನು, ಅಣ್ಣತಮ್ಮಂದಿರನ್ನು ಕೂಡಾ ಹತ್ತಿರ ಸುಳಿಯದಂತೆ ತಾವೇ ಸ್ವಯಂ ನಿರ್ಮಿತ ನಿಯಮಗಳನ್ನು ಹೇರಿ ತಾವೇ ದೊಡ್ಡ ಖಾಝಿಗಳಂತೆ ನಮಾಝ್ ಗೆ ನೇತೃತ್ವ ಕೊಟ್ಟು ಕ್ಯಾಮರಾಗಳಿಗೆ ಪೋಸ್ ಕೊಡುವುದು ಯಾವ ಪುರುಷಾರ್ಥಕ್ಕಾಗಿ ಎಂದು ಒಂದಿಷ್ಟು ಚಿಂತನೆ ಮಾಡುವುದೊಳಿತು.
ಇದೆಲ್ಲಾ ನೋಡುವಾಗ ಇದು ಮಯ್ಯಿತಿನೊಂದಿಗೆ ತೋರುವ ಅತ್ಯಂತ ದೊಡ್ಡ ಅನ್ಯಾಯವೆನ್ನದಿರಲು ಸಾಧ್ಯವೇ ಇಲ್ಲ. 
ಕೇವಲ ಕೊರೋನ ಎಂಬ ಕಾಯಿಲೆಗೆ ತುತ್ತಾಗಿ ಮರಣ ಹೊಂದಿದ ಏಕಮಾತ್ರ ಕಾರಣಕ್ಕೆ ಈ ಮಯ್ಯಿತ್ ಅನುಭವಿಸಿದ ಯಾತನೆಗಳೆಷ್ಟು.
ಅಗತ್ಯವಿದ್ದೋ ಅಗತ್ಯವಿಲ್ಲದೆಯೋ ದಿನಗಟ್ಟಲೆ ಐಸಿಯುವಿನಲ್ಲಿ ಅಲ್ಲಿನ ಸಿಬ್ಬಂದಿಗಳ ಸ್ವಯಂ ನಿರ್ಮಿತ ನಿಯಮಗಳ ಮದ್ಯೆ ನರಳಾಟ. ಮರಣಹೊಂದಿದ ನಂತರ ಶವಾಗಾರದಲ್ಲಿ ಗಂಟೆಗಟ್ಟಲೆ ಆಸ್ಪತ್ರೆ ಅಧಿಕಾರಿಗಳ ಸ್ವಯಂ ನಿರ್ಮಿತ ನಿಯಮಗಳು. ಅಲ್ಲಿಂದ ಆಂಬುಲೆನ್ಸ್ ನ ಸ್ವಯಂ ನಿರ್ಮಿತ ನಿಯಮಗಳು.
ಕೊನೆಯದಾಗಿ ಈಗ ಈ ಸ್ವಯಂ ಸೇವಾ ಸಂಘಗಳ ಸ್ವಯಂ ನಿರ್ಮಿತ ನಿಯಮಗಳು.

ಇದು ಹೇಳುವಾಗ ಯಾರೂ ಹೆಗಲು ಮುಟ್ಟಿ ನೋಡ ಬೇಕಾಗಿಲ್ಲ.ಮೊನ್ನೆ ಒಂದು ಸಹೋದರಿಯ ಮಯ್ಯಿತನ್ನು ಸ್ವಂತ ತಮ್ಮನಿಗೆ ತೋರಿಸುವ ರೀತಿ ನೋಡಿದಾಗ ಬಹಳ ಅಸಹ್ಯವೆನಿಸಿತು.ಯಾಕೆ ಈ ರೀತಿ ಸುಖಾ ಸುಮ್ಮನೆ ನಿಯಮಗಳನ್ನು ಹೇರಿ ಭೀತಿ ಹುಟ್ಟಿಸುವುದು ಎಂದು ತಿಳಿಯುವುದಿಲ್ಲ.

ಸಂಘಟನೆಗಳು ಯಾವುದೇ ಆಗಿರಲಿ. 
ಪಿಪಿಇ ಕಿಟ್ ಧರಿಸಿ ಮಯ್ಯಿತನ್ನು ದಫನ ಮಾಡಿದ ಮಾತ್ರಕ್ಕೆ ದೊಡ್ಡ ಮಹಾ ಸಾದನೆಗಳನ್ನು ಮಾಡಿದಂತೆ ವರ್ತಿಸುವ ನಿಮ್ಮಲ್ಲಿ ಕೇಳಲಿಕ್ಕಿರುವುದು ಯಾವತ್ತಾದರೂ ಈ ಅಲಿಖಿತ ನಿಯಮಗಳ ಕುರಿತು ಚಿಂತಿಸಿದ್ದೀರೋ.
ಅಥವಾ ಅದರ ಕುರಿತು ಎಲ್ಲಿಯಾದರೂ ಚಕಾರವೆತ್ತಿದ್ದೀರೋ.
ಒಂದು ವೇಳೆ ಅದಕ್ಕೆ ಬೇಕಾಗಿ ಹೋರಾಟ ಮಾಡಿ ಬೇಡಿಕೆಗಳು ಈಡೇರಿಲ್ಲ ಎಂದಾದರೆ ಅದು ಬೇರೆ ವಿಷಯ.
ಅದ್ಯಾವುದೂ ಮಾಡದೆ ನಿಮ್ಮ ಈ ವರ್ತನೆಗಳು ಸಹಿಸಲಾಗದು.ಯಾವಾಗಲೂ ಸಂಘಟನೆಗಳ ಹೋರಾಟ ಅನ್ಯಾಯಗಳ ವಿರುದ್ಧ ಹಾಗೂ ನಿಷೇದಿಸಲ್ಪಟ್ಟ ಹಕ್ಕುಗಳನ್ನು ಸಂವಿಧಾನಾತ್ಮಕವಾಗಿ ಪಡೆಯಲಿಕ್ಕಾಗಿರ ಬೇಕು.ಅಲ್ಲದೆ ಕೇವಲ ತೋರಿಕೆಯ ನಾಟಕಗಳಾಗಬಾರದು.

Saturday, August 15, 2020

ಇವರನ್ನು ಅವಮಾನಿಸಿದರೆ ಮಾನವ ಸಮೂಹ ಕ್ಷಮಿಸದು-Humans are not forgiven if they are insulted



✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ

1957ರಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಅಣ್ಣಾ ದೊರೈ ಯವರು ಒಂದು ದೀರ್ಘ ಭಾಷಣ ಮಾಡುತ್ತಾ ಪೈಗಂಬರ್ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಬಗ್ಗೆ ಸವಿಸ್ತಾರವಾಗಿ ಮಾತನಾಡುತ್ತಾರೆ.
ಚರಿತ್ರೆಯಲ್ಲಿ ಪೈಗಂಬರರು ಯಾಕೆ ಸರಿಸಾಟಿಯಿಲ್ಲದ ಮೇರು ವ್ಯಕ್ತಿಯಾಗಿ ಗೋಚರಿಸುತ್ತಾರೆ ಎಂದು ವಿವರಿಸುತ್ತಾ ಪೈಗಂಬರರ ತತ್ವ ಸಿದ್ದಾಂತಗಳು ಆರನೇ ಶತಮಾನದಲ್ಲಿ ಯಾವ ರೀತಿ ಪ್ರಸ್ತುತವಾಗಿತ್ತೋ ಅದೇ ರೀತಿ ಹತ್ತೊಂಬತ್ತನೇ ಶತಮಾನದಲ್ಲಿ ಕೂಡಾ ಪ್ರಸ್ತುತ.
ಅನೇಕ ವಿಷಯಗಳಲ್ಲಿ ಅನೇಕ ನಿರ್ಧಾರಗಳನ್ನು ತೆಗೆಯುವಲ್ಲಿ ಜಗತ್ತು ಎಡವುತ್ತಿರುವ ಇಂದಿನ ಯುಗದಲ್ಲಿ
ಆರನೇ ಶತಮಾನದಲ್ಲಿ ಪೈಗಂಬರರು ತೆಗೆದು ಕೊಳ್ಳುತ್ತಿದ್ದ ಹಲವು ನಿರ್ಧಾರಗಳು ಇದಕ್ಕೆಲ್ಲಾ ಪರಿಹಾರವಾಗಿ ಕಂಡು ಬರುತ್ತವೆ.
ಮಾತ್ರವಲ್ಲ ಕತ್ತಲ ಯುಗವೆಂದು ಇತಿಹಾಸಕಾರರಿಂದ ವಿಷ್ಲೇಸಿಸಲ್ಪಟ್ಟ ಯುಗದಲ್ಲಿ ಪೈಗಂಬರ್ ರವರು ತನ್ನ ಮೌನಕ್ರಾಂತಿಯ ಮೂಲಕ ಕೇವಲ 23 ವರ್ಷಗಳ ಅವಧಿಯಲ್ಲಿ ಒಂದು ಉದಾತ್ತ ಸಮೂಹವನ್ನು ಕಟ್ಟಿ ಬೆಳೆಸಿರುವುದು ಚರಿತ್ರೆಯಲ್ಲಿ ಸರಿಸಾಟಿಯಿಲ್ಲದ ಸಂಭವವಾಗಿದೆ.ಅಣ್ಣಾ ದೊರೈಯವರು ಇನ್ನೂ ಅನೇಕ ವಿಚಾರಗಳನ್ನು ಪೈಗಂಬರ್ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಕುರಿತು ತನ್ನ ಭಾಷಣದಲ್ಲಿ ಪ್ರಸ್ತಾಪಿಸಿರುತ್ತಾರೆ.

ಇನ್ನು ಪ್ರಸಿದ್ಧ ಚಿಂತಕ ಡಾ ಮೈಕೆಲ್ ಹೆಚ್ ಹಾರ್ಟ್ ಇತಿಹಾಸದಲ್ಲಿ ಸರಿಸಾಟಿಯಿಲ್ಲದ ನೂರು ಪ್ರಭಾವೀ ನಾಯಕರ ಕುರಿತು ಬರೆದ ದ ಹನ್ಡ್ರಡ್ ಎಂಬ ಪುಸ್ತಕದಲ್ಲಿ ತನ್ನ ನಾಯಕ ಯೇಸು ಕ್ರಿಸ್ತರಿಗಿಂತ ನೂರರಲ್ಲಿ ಮೊದಲ ಸ್ಥಾನ ಪೈಗಂಬರ್ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರಿಗೆ ನೀಡಿರುತ್ತಾರೆ.
ಮುಂದುವರಿದು ಅವರು ಹೇಳುತ್ತಾರೆ. ಇಲ್ಲಿ ಯೇಸು ಕ್ರಿಸ್ತರಿಗಿಂತ ಪೈಗಂಬರರಿಗೆ ಮೊದಲ ಸ್ಥಾನವನ್ನು ನೀಡಿರುವುದು ಆಶ್ಚರ್ಯಗೊಳಿಸಬಹುದು. ಆದರೆ ನಾನು ಆಯ್ಕೆ ಮಾಡಿದ ನೂರು ನಾಯಕರಲ್ಲಿ ನನಗೆ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿ ಎದ್ದು ಕಾಣುವುದು ಪೈಗಂಬರ್ ರಾಗಿರುತ್ತಾರೆ.ಯಾಕೆಂದರೆ ಪೈಗಂಬರರ ಕ್ರಾಂತಿಯ ಮುಂದೆ ಯಾವುದೇ ನಾಯಕನ ಕ್ರಾಂತಿಯು ಸರಿಸಮಾನವಾಗಿ ಗೋಚರಿಸುವುದೇ ಇಲ್ಲ.

he list of the world's most influential persons may surprise some readers and may be questioned by others, but he was the only man in history who was supremely successful on both the religious and secular level.
Michael H. Hart, The 100: A Ranking of the Most Influential Persons in History

ಇದೇ ರೀತಿ ಮುಹಮ್ಮದ್ ಎಂಬ ತನ್ನ ಹೆಸರೇ ಸೂಚಿಸುವಂತೆ ಸರ್ವರಿಂದಲೂ ಪ್ರಶಂಸಿಸಲ್ಪಟ್ಟ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಮಹಾಮಾನವತಾವಾದಿ ಯಾಗಿದ್ದರೆಂಬುದಕ್ಕೆ ಹೆಚ್ಚು ಪುರಾವೆಗಳ ಅಗತ್ಯವಿದೆಯೆಂದು ತೊಚುವುದಿಲ್ಲ.
ಸತ್ಯವನ್ನು ಹೇಳಿದನೆಂಬ ಏಕೈಕ ಕಾರಣಕ್ಕೆ ತನ್ನನ್ನು ಅತಿಯಾಗಿ ವಿರೋಧಿಸಿ ನೀಡಬಾರದ ಎಲ್ಲಾ ಕಿರುಕುಳವನ್ನು ನೀಡಿ ತನ್ನ ಶರೀರದಿಂದ ರಕ್ತ ದಾರೆದಾರೆಯಾಗಿ ಸುರಿಯುತ್ತಿರುವಾಗಲೂ ದೇವದೂತರು ಬಂದು ಕೇಳಿದರು.ಆ ಕಾಣುವ ಪರ್ವತಗಳನ್ನು ಆ ಅಕ್ರಮಿಗಳ ಮೇಲೆ ಸರಿಸಿ ಅವರನ್ನು ನಾಶ ಮಾಡಲಿಯಾ.
ಪ್ರವಾದಿವರ್ಯರಿಂದ ಬಂದ ಉತ್ತರ. ಬೇಡ. ನನಗೆ ಬೇಕಾಗಿರುವುದು ನನ್ನ ಮೇಲೆ ನಡೆದ ಹಿಂಸೆಗೆ ಪ್ರತಿ ಹಿಂಸೆಯಲ್ಲ.ಅಕ್ರಮಗಳಿಗೆ ಪ್ರತೀಕಾರವೂ ಅಲ್ಲ.
ನನಗೆ ಬೇಕಾಗಿರುವುದು ಈ ಮನುಷ್ಯರೆಲ್ಲಾ ಸನ್ಮಾರ್ಗಿಗಳಾಗಿ ತೀರಬೇಕೆಂಬುದು ಮಾತ್ರವಾಗಿದೆ.
ಮನುಷ್ಯ ಕುಲದ ಒಳಿತನ್ನು ಮಾತ್ರ ಸದಾ ಬಯಸಿದ ಅದಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ಮಹಾ ಮಾನವ ಪ್ರೇಮಿ ಮಾತ್ರವಲ್ಲ. ಮನುಷ್ಯನಿರಲಿ ಒಂದು ಇರುವೆಯನ್ನೂ ಸಹ ನೋಯಿಸದ ನಿಷ್ಕಳಂಕ ಮನಸ್ಸಿನ ವಕ್ತಾರರಾದ ಈ ಪ್ರವಾದಿವರ್ಯರನ್ನು ನಿಂದಿಸಿದರೆ ನಿಷ್ಪಕ್ಷ ಮನಸ್ಸಿನ ಮಾನವ ಸಮೂಹ ಕ್ಷಮಿಸಲು ಸಾಧ್ಯವಿಲ್ಲ ಖಂಡಿತ.
ಪ್ರವಾದಿಯವರ ಜೀವನ ಚರಿತ್ರೆಯು ತೆರೆದಿಟ್ಟ ಪುಸ್ತಕದಂತೆ ಯಾರಿಗೂ ಯಾವಾಗಲೂ ಅರಿತು ಕೊಳ್ಳಬಹುದು.ಜೀವನದಲ್ಲಿ ಒಂದು ಸುಳ್ಳಲ್ಲ ಸುಳ್ಳು ಎಂದು ಅನುಮಾನ ಬರುವಂತಹ ಮಾತೂ ಆಡದ ಸಂಶುದ್ಧ ಜೀವನವನ್ನು ಸಾಗಿಸಿದ ಮಹತ್ವ್ಯಕ್ತಿತ್ವದ ವಕ್ತಾರರಾಗಿರುತ್ತಾರೆಂದು ಅವರ ಜೀವನ ಚರಿತ್ರೆಗಳನ್ನು ದರ್ಶಿಸುವ ಎಲ್ಲರಿಗೂ ಮನದಟ್ಟಾಗುವ ವಿಷಯವಾಗಿದೆ.
ಆದರೆ ಇದನ್ನೆಲ್ಲಾ ದರ್ಶಿಸಲು ನಿಷ್ಪಕ್ಷಪಾತ ಕಣ್ಣೂ ಮನಸ್ಸೂ ಇರಬೇಕು ತಾನೇ.

ಮೊನ್ನೆ ಡಿ.ಜೆ.ಹಳ್ಳಿಯಲ್ಲಿ ಒಮ್ಮೆಯೂ ನಡೆಯಬಾರದ ಘಟನೆಗಳು ನಡೆದು ಎಲ್ಲರೂ ತಲೆತಗ್ಗಿಸುವಂತೆ ಮಾಡಿದಾಗ ಇದೆಲ್ಲಾ ಬರೆಯಬೇಕೆಂದೆನಿಸಿತು.
ಇದೆಲ್ಲಾ ಯಾವ ಪುರುಷಾರ್ಥ ಸಾಧನೆಗಾಗಿ ನಡೆಯಿತು.ಇದರಲ್ಲಿರುವ ಷಡ್ಯಂತ್ರಗಳೇನಿರ ಬಹುದು.ಯಾವುದೂ ಅರ್ಥವಾಗದ ರಹಸ್ಯಗಳು.
ಡಿ.ಜೆ ಹಳ್ಳಿಯಲ್ಲಿ ನಡೆದ ಅಕ್ರಮ ಚಟುವಟಿಕೆಗಳು ಒಮ್ಮೆಯೂ ಸಮರ್ಥನೀಯವಲ್ಲವಾದರೂ 
ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಆಲೈಹಿ ವಸಲ್ಲಮರಂತಹ ಮಹತ್ವ್ಯಕ್ತಿತ್ವವನ್ನು ಟೀಕಿಸುವವನು ಮುಸಲ್ಮಾನನಾಗಲು ಸಾಧ್ಯವಿಲ್ಲ ತಾನೆ.
ಅದೇ ರೀತಿ ನಿಜವಾದ ಹಿಂದುವೋ ಕ್ರೈಸ್ತನೋ ಇನ್ಯಾವುದೋ ಧರ್ಮದ ಅನುಯಾಯಿಯಾಗಲೂ ಸಾಧ್ಯವಿಲ್ಲ.
ಯಾಕೆಂದರೆ ವ್ಯಾಸ ಮಹರ್ಷಿಗಳ ಭವಿಷ್ಯತ್ ಪುರಾಣ ಸೇರಿದಂತೆ ಹಿಂದೂ ಪುರಾಣಗಳು ಹಾಗೂ 
ಇತರೆಲ್ಲಾ ಧರ್ಮ ಗ್ರಂಥಗಳು,ಧರ್ಮಾಚಾರ್ಯರು ಈ ಮಹಾನು ಭಾವರನ್ನು ಹಾಡಿ ಹೊಗಳಿದ್ದಾರೆ.
ಹೀಗಿರುವಾಗ ಇವರನ್ನು ನಿಂದಿಸುವವನು ಯಾವುದೇ ಧರ್ಮದ ನೈಜ ಅನುಯಾಯಿಯಾಗಿರಲು ಸಾಧ್ಯವೇ ಇಲ್ಲ.

ಆದ್ದರಿಂದಲೇ ಈ ಪ್ರವಾದಿ ವರ್ಯರನ್ನು ಇಡೀ ಮಾನವ ಕುಲವೇ ಗೌರವಿಸುತ್ತದೆ.ಪ್ರೀತಿಸುತ್ತದೆ.

ಅದರಲ್ಲೂ ಮುಸ್ಲಿಮರು ಅವರ ತಂದೆತಾಯಿ,ಸಂತಾನ, ಬಂಧುಬಳಗ ಎಲ್ಲಕ್ಕಿಂತಲೂ ಮಿಗಿಲಾಗಿ ಪ್ರೀತಿಸುತ್ತಾರೆ.
ಪ್ರೀತಿಸಲೇ ಬೇಕು.ಇಲ್ಲ ಪ್ರೀತಿಸದೆ ವಿಶ್ವಾಸ ಪೂರ್ಣವೇ ಅಲ್ಲ.

ಮಾತ್ರವಲ್ಲ ಅವರ ಅವಮಾನವನ್ನು ಮುಸ್ಲಿಮ್ ಮನಸ್ಸುಗಳು ಸಹಿಸಲು ಸಾಧ್ಯವೇ ಇಲ್ಲ.
ಹೀಗಿರುವಾಗ ಮುಸ್ಲಿಮರನ್ನು ಕೆರಳಿಸಲೆಂದೇ ಕೆಲವು ವಿಕೃತ ಮನಸ್ಸಿನ ಮನುಷ್ಯರು ಶ್ರಮಿಸುವಾಗ ಮನುಷ್ಯನ ನೆಮ್ಮದಿ ಕೆಡದಿರಲು, ಅನಿಷ್ಟಗಳು ಸಂಭವಿಸದಿರಲು ಸಂಭಂದಪಟ್ಟ ಅಧಿಕಾರಿಗಳು,ಸರಕಾರಗಳು ಬಹಳ ಎಚ್ಚರಿಕೆಯಿಂದ ಇರುವುದು ಒಳಿತು.ಇದಕ್ಕೆ ಸಂಬಂಧ ಪಟ್ಟ ಎಲ್ಲಾ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಕ್ರಮ ಕೈಗೊಂಡರೆ ಅನಾಹುತಗಳನ್ನು ತಪ್ಪಿಸಬಹುದು.

ಒಂದು ವಿಚಾರವನ್ನು ಎಲ್ಲರೂ ಅರ್ಥೈಸಿ ಕೊಳ್ಳಬೇಕು.ಅದೇನೆಂದರೆ ಇಡೀ ಜಗತ್ತೇ ಅತ್ಯಂತ ಗೌರವದಿಂದ ಕಾಣುವ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರನ್ನು ಅವಮಾನಿಸಿ ಅದರಿಂದ ಏನಾದರೂ ಲಾಭ ಪಡೆಯ ಬೇಕೆಂದು ಕನಸು ಕಾಣುತ್ತಿದ್ದರೆ ಅದು ಬರೀ ಕನಸಾಗಿಯೇ ಉಳಿಯಲಿದೆಯೇ ಹೊರತು ಪ್ರವಾದಿಯವರ ಕೀರ್ತಿ ದೈನಂದಿನ ಬಾನೆತ್ತರಕ್ಕೆ ಏರುತ್ತಲೇ ಇರುತ್ತದೆ.ಚೆಂಡು ಎಷ್ಟು ಬಲವಾಗಿ ಹೊಡೆಯುತ್ತದೋ ಅಷ್ಟೇ ವೇಗದಲ್ಲಿ ಅದು ಮೇಲೆಕ್ಕೇರುತ್ತದೆ.
ಇತಿಹಾಸದಲ್ಲಿ ಹಿಂದೆಯೂ ಅನೇಕರು ಈ ಚೆಂಡನ್ನು ಹೊಡೆದು ನೋಡಿರುತ್ತಾರೆ.ಆದರೆ ಅವರ ಕೈಗಳು ಸಸ್ತಾಗಿದೆಯೇ ಪ್ರವಾದಿ ವರ್ಯರಿಗೆ ಏನೇನೂ ಸಂಬವಿಸಿಲ್ಲ.ಸಂಭವಿಸುವುದೂ ಇಲ್ಲ.
ಇಂತಹ ಸಂದರ್ಭಗಳಲ್ಲಿ ಮುಸ್ಲಿಮ್ ಸಮಾಜ ಯಾವುದೇ ಕ್ಷಣಿಕ ಉದ್ವೇಗಗಳಿಗೆ ಒಳಗಾಗದೆ ಸ್ವಯಂ ನಿಯಂತ್ರಕರಾಗಿ ಪ್ರಬುದ್ಧತೆಯನ್ನು ಮೆರೆಯಬೇಕು.ಕಾನೂನಿನಲ್ಲಿ ಹೋರಾಟಕ್ಕೆ ಬೇಕಾದಷ್ಟು ದಾರಿಗಳಿವೆ.ಅದನ್ನೆಲ್ಲಾ ಉಪಯೋಗಿಸಿ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆ ಕೊಡಿಸುವ ಅವಕಾಶಗಳಿರುವಾಗ ಕಾನೂನು  ಕೈಗೆತ್ತಿಕೊಂಡು ಇಂತಹ ವರ್ತನೆಗಳು ಯಾವತ್ತೂ ಸಂಭವಿಸದಂತೆ ಅತ್ಯಂತ ಜಾಗೃತೆಯಿಂದ ಹೆಜ್ಜೆಯಿಡ ಬೇಕಾಗಿದೆ.

ಇನ್ನು ಸರ್ಕಾರಗಳಿಗೆ ಇಲ್ಲಿನ ಶಾಂತಿ ಸಮಾಧಾನ ಬಯಸುವ ನಿಷ್ಕಳಂಕ ಕಾಳಜಿಯಿರುವುದಾದರೆ ಇಂತಹ ವಿಷಯಗಳಲ್ಲಿ ಬಹಳ ಮುನ್ನೆಚ್ಚರಿಕೆ ವಹಿಸಲೇ ಬೇಕು.
ವಿವಿಧ ಸಂಸ್ಕೃತಿಯ ಬೀಡಾಗಿರುವ ಈ ನಾಡಿನಲ್ಲಿ ಯಾರೂ ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲೇಬೇಕು.
ಇದು ಸ್ವಸ್ತ ನಾಡಿನ ನಿರ್ಮಾಣಕ್ಕೆ ಅನಿವಾರ್ಯವಾಗಿದೆ ಎಂಬುದರಲ್ಲಿ ಸಂದೇಹವೇ ಇಲ್ಲ.

Tuesday, August 11, 2020

ಎಡವಿದ್ದು ನಿಜ.ಅದೆಲ್ಲಿ?


ಅತ್ಯುತ್ತಮ ವಿದ್ಯೆ ಕಲಿಯಲು ಅನುಕೂಲವಾಗುವ ಕನ್ನಡದಲ್ಲಿರುವ ಈ ತರಗತಿಯು ಅತ್ಯಂತ ಉಪಯುಕ್ತವಾಗಿದೆ.

ಆದರೂ ಐದು ನಿಮಿಷ ಸಮಯ ಮಾತ್ರ ಬಹಳ ಕಡಿಮೆಯಾಯ್ತು ಎಂಬ ವೀಕ್ಷಕರ ಬೇಡಿಕೆಯನ್ನು ಅನುಸರಿಸಿ ತರಗತಿಗಳ ಸಮಯವನ್ನು ಹೆಚ್ಚುಗೊಳಿಸಲಾಗಿದೆ.

ತಪ್ಪದೆ ಎಲ್ಲಾ ತರಗತಿಗಳನ್ನು ಕೇಳಿ ಕಳಿತು ವಿದ್ಯಾ ಸಂಪನ್ನರಾಗಲು ಪ್ರಯತ್ನ ಪಡಬೇಕು.ಅಲ್ಲಾಹು ಅನುಗ್ರಹಿಸಲಿ.ಆಮೀನ್.

 PP usthad: ಎಡವಿದ್ದು ನಿಜ.ಅದೆಲ್ಲಿ?

___________


✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ

____________


ಹಿಂದಿನ ತಲೆಮಾರಿಗಿದ್ದ ಏನೋ ಒಂದನ್ನು ಇವತ್ತಿನ 

ತಲೆಮಾರು ಕಳೆದು ಕೊಂಡಿರುವುದು ನಿಜ. 

ಅದೇನೆಂದು ಚಿಂತಿಸಿ ಮರಳಿ ಪಡೆಯದೆ ಸಮಸ್ಯೆಗಳ ಸುಳಿಯಿಂದ ಪಾರಾಗಲು ಸಾಧ್ಯವಿಲ್ಲ ಖಂಡಿತ.

ಅದು ಸಂಪತ್ತೋ ರಾಜಕೀಯವೋ ಬಲಾಢ್ಯತೆಯೋ

ಬೇರೆ ಯಾವುದೇ ಸ್ವಾಧೀನಗಳೋ ಅಲ್ಲ.


ಅದು ಮನುಷ್ಯನ ಹೃದಯಕ್ಕೆ ಸಂಬಂಧಿಸಿದ ಆಧ್ಯಾತ್ಮಿಕ ಚಿಂತನೆ ಮಾತ್ರವಾಗಿದೆ.


ಇವತ್ತು ಮನುಷ್ಯ ಮನಸ್ಸುಗಳು ತೀರಾ ಮಲಿನಗೊಂಡು ನಾರುತ್ತಿದ್ದು ಅಸಹ್ಯ ಹುಟ್ಟಿಸುವ ಮಟ್ಟಕ್ಕೆ ತಲುಪಿದೆ.

ಇದರಿಂದ ಮಾನವೀಯ ಮೌಲ್ಯಗಳೆಲ್ಲಾ ಸಂಪೂರ್ಣ ಮಾಯವಾಗಿ ಮನುಷ್ಯನು ಮೃಗ ಸಮಾನನಾಗಿ ಜೀವಿಸುವ ಅಪಾಯ ಬಂದೊದಗಿದೆ.

ಅದ್ದರಿಂದಲೇ ಈ ಆಧ್ಯಾತ್ಮಿಕ ಚಿಂತನೆಯ ಬಗ್ಗೆ ಚಿಂತನೆ ಅನಿವಾರ್ಯವಾಗಿದೆ.


ಏನಿದು ಆಧ್ಯಾತ್ಮಿಕ ಚಿಂತನೆ.?


ಅದು ಬೇರೇನೂ ಅಲ್ಲ.ಸೃಷ್ಟಿಕರ್ತನಾದ ಅಲ್ಲಾಹನನ್ನು ಹೃದಯದಿಂದ ದರ್ಶಿಸುವುದಾಗಿದೆ ಆದ್ಯಾತ್ಮಿಕತೆ.

ಅದು ಶರೀಅತ್,ತ್ವರೀಖತ್ ಗಳಲ್ಲಿ ಪಯಣಿಸಿ ಹಖೀಖತ್ ಮಅರಿಫತಿನಲ್ಲಿ ಪರ್ಯವಸಾನಗೊಳ್ಳುತ್ತದೆ. ಹೃದಯವು ಅಲ್ಲಾಹನೊಂದಿಗೆ ಸಂಪರ್ಕ ಸಾಧಿಸುವ ಮಹೋನ್ನತ ಪದವಿಯೇ ಮಅರಿಫತ್.


ಈ ಪಯಣಕ್ಕೆ ತಸವ್ವುಫ್ ಎಂದೂ ಪಯಣಿಗನಿಗೆ ಸೂಫೀ ಎನ್ನಲಾಗುತ್ತದೆ.ಈ ಸೂಫೀ ಚಿಂತನೆಯಾಗಿದೆ ಇಸ್ಲಾಮಿನ ನೈಜತೆ.

ಈ ಮಾರ್ಗದಲ್ಲಿ ಮನುಷ್ಯನನ್ನು ಕೊಂಡೊಯ್ಯುವ ಮಾರ್ಗದರ್ಶಿಗಳೇ ತ್ವರೀಖತಿನ ಮಷಾಇಖ್ ಗಳು.

ಶರೀಅತಿನಲ್ಲಿ ಎಚ್ಚರಿಕೆ ವಹಿಸಿ ಸುಲೂಕ್ ಪ್ರಯಾಣದಲ್ಲಿ ಏರ್ಪಟ್ಟು ಅವನು ಮುಂದುವರಿಯುತ್ತಿದ್ದಂತೆಯೇ ಮನುಷ್ಯನ ಹೃದಯವು ಶುದ್ಧವಾಗುತ್ತಾ ಹೋಗುತ್ತದೆ.

ಹೃದಯವು ಪರಿಪೂರ್ಣ ಶುದ್ಧಿ ಪ್ರಾಪ್ತಿಯಾಗುವಾಗ ಆ ಹೃದಯವು ಅಲ್ಲಾಹನ ಪವಿತ್ರ ಸಂಪರ್ಕ ಸ್ಥಾಪಿಸಿ ನೂರುತ್ತಜಲ್ಲಿಯನ್ನು ದರ್ಶಿಸಲು ಸನ್ನದ್ಧವಾಗುತ್ತದೆ.

ತಸವ್ವುಫಿನಲ್ಲಿ ಮನುಷ್ಯನ ಹೃದಯ ಮುಖ್ಯವೆನಿಸುತ್ತದೆಯೇ ಹೊರತು ಕ್ರಿಯೆಗಳೋ ವೇಷ ಭೂಷಣಗಳಲ್ಲ.


ಎಲ್ಲೇ ಇರಲಿ ಹೇಗೇ ಇರಲಿ ಹೃದಯದಲ್ಲಿ ಮಾತ್ರ ಇಲಾಹೀ ಚಿಂತನೆ ತಪ್ಪಿಹೋಗದಂತೆ ಜಾಗೃತೆ ವಹಿಸಿ ಕೊಳ್ಳುವುದೇ ನಿಜವಾದ ತಸವ್ವುಫ್.


ಅಲ್ಲದೆ ವಿವಿಧ ರೋಗಗಳಿಂದ ರೋಗಗ್ರಸ್ತವಾದ ಹೃದಯಗಳನ್ನಿಟ್ಟು ಕೊಂಡವರಿಗೆ ತಸವ್ವುಫಿನ ಗಂಧಗಾಳಿ ಬೀಸಲೂ ಸಾಧ್ಯವಿಲ್ಲ. 

ಹಾಗೂ ಸೂಫಿಯಾಗಲು ಖಂಡಿತ ಸಾಧ್ಯವಿಲ್ಲ.


ಇನ್ನು ಕೆಲವರು ಭಾವಿಸಿದಂತೆ ಶರೀಅತಿನ ನಯಮಗಳೆನ್ನೆಲ್ಲಾ ಗಾಳಿಗೆ ತೂರಿ ವೇಷಭೂಷಣಗಳಲ್ಲಿ

ಸೂಫೀ ವೇಷ ಕಟ್ಟುವುದೂ ಅಲ್ಲ.

ಅಥವಾ ಆಖಿರತಿನ ಹೆಸರು ಹೇಳಿ ಇಹಲೋಕದ ಎಲ್ಲಾ ವ್ಯವಸ್ಥೆಗಳನ್ನು ತ್ಯಜಿಸುವುದೂ ಅಲ್ಲ.

ತಸವ್ವುಫಿನ ಹೆಸರು ಹೇಳಿ ಇಹಲೋಕದ ಸುಖಸೌಕರ್ಯಗಳಲ್ಲಿ ಅತಿಯಾಗಿ 

ಏರ್ಪಡುವುದೂ ಅಲ್ಲ.


ದುನ್ಯಾಗೆ ಬೇಕಾಗಿ ಆಖಿರತನ್ನು ಉಪೇಕ್ಷಿಸುವವನಾಗಲಿ ಆಖಿರತಿಗೆ ಬೇಕಾಗಿ ದುನ್ಯಾವನ್ನು ಸಂಪೂರ್ಣ ಉಪೇಕ್ಷಿಸುವವನಾಗಲಿ ಸತ್ಯವಿಶ್ವಾಸಿಯಾಗಲು ಸಾಧ್ಯವೇ ಇಲ್ಲ.


 واعمل لدنياك كانك تعيش ابدا  واعمل لاخرتك كانك تموت غدا


ದುನ್ಯಾದ ಕಾರ್ಯಗಳಲ್ಲಿ ಏರ್ಪಡುವಾಗ ಇದು ಶಾಶ್ವತ ಎಂದು ಭಾವಿಸಿ ಅದನ್ನು ಬಹಳ ಅಚ್ಚುಕಟ್ಟಾಗಿಯೇ ನಿರ್ವಹಿಸಬೇಕು.

ಆಖಿರತಿನ ವಿಷಯಗಳಲ್ಲಿ ಏರ್ಪಡುವಾಗ ಸದ್ಯದಲ್ಲೇ ನಾನು ಮರಣಹೊಂದಲಿದ್ದು ಅದಕ್ಕಾಗಿ ಬಹಳ ನಿಸ್ವಾರ್ಥವಾಗಿ ಇದನ್ನು ನಿರ್ವಹಿಸಬೇಕೆಂಬ ಭಾವನೆಯಿರಬೇಕು ಎಂದಾಗಿದೆ ತಾತ್ಪರ್ಯ.

ಎಷ್ಟೊಂದು ಅರ್ಥಪೂರ್ಣ ಮಾತು.


ಎಲ್ಲಾ ವಿಷಯಗಳಲ್ಲಿ ನಕಲಿಗಳು ತುಂಬಿ ಗೊಂದಲದ ಗೂಡಾಗಿ ವ್ಯವಸ್ಥೆಗಳೆಲ್ಲಾ ಅವ್ಯವಸ್ಥೆಯ ಆಗರವಾಗಿರುವ  ಇಂದಿನ ಸನ್ನಿವೇಶದಲ್ಲಿ ಮೇಲಿನ ಮಾತು ಬಹಳ ಬಹಳ ಚಿಂತನಾರ್ಹವಾಗಿದೆ.


ಆದ್ದರಿಂದಲೇ ತಸವ್ವುಫ್ ಕೂಡಾ ಗೊಂದಲಗೊಳ್ಳದಂತೆ ಜಾಗೃತೆ ಪಾಲಿಸಬೇಕಾದ ಅಗತ್ಯವಿದೆ. 

ತಸವ್ವುಫ್ ಹೃದಯದಿಂದ ಇಲಾಹೀ ಚಿಂತನೆ ಪ್ರಾರಂಭಗೊಂಡು ಅದು ಬಲಗೊಳ್ಳುತ್ತಾ ಮಅರಿಫತಿನಲ್ಲಿ ಕೊನೆಗೊಳ್ಳುತ್ತದೆ. ಇಲ್ಲಿಯೆಲ್ಲಾ ಹೃದಯ ಕೇಂದ್ರೀಕೃತ ಪರಮ ಶ್ರದ್ಧೆ ಅತ್ಯಗತ್ಯವಾಗಿದೆ.


أَلَا وَإِنَّ فِي الْجَسَدِ مُضْغَةً إِذَا صَلَحَتْ صَلَحَ الْجَسَدُ كُلُّهُ، وَإِذَا فَسَدَتْ فَسَدَ الْجَسَدُ كُلُّهُ، أَلَا وَهِيَ الْقَلْبُ


ಅರಿಯಿರಿ. ಮನುಷ್ಯ ಶರೀರದಲ್ಲಿ ಒಂದು ಮಾಂಸ ತುಂಡಿದೆ.ಅದು ಉತ್ತಮವಾದರೆ ಮನುಷ್ಯ ಶರೀರ ಸಕಲವೂ ಉತ್ತಮವಾಗುತ್ತದೆ.ಅದು ಕೆಟ್ಟು ಬಿಟ್ಟರೆ ಶರೀರ ಸಕಲವೂ ಕೆಟ್ಟು ಬಿಡುತ್ತದೆ.ಅರಿಯಿರಿ ಅದು ಮನುಷ್ಯನ ಹೃದಯ ವಾಗಿರುತ್ತದೆ.


ಹೃದಯವನ್ನು ಶುದ್ಧವಾಗಿಡುವುದೇ ಆಧ್ಯಾತ್ಮಿಕತೆ.

ಮನುಷ್ಯನ ಹೃದಯಕ್ಕೆ ಬಾಧಿಸುವ ಅನೇಕ ರೋಗಗಳಿವೆ.ಆ ರೋಗಗಳಿಂದೆಲ್ಲಾ ಹೃದಯವನ್ನು ಕಾಪಾಡಿ ಸಂರಕ್ಷಿಸುವುದು ಸ್ವಲ್ಪ ಪ್ರಯಾಸಕರ ಸಂಗತಿಯಾದರೂ ಅದು ಮನುಷ್ಯನ ಇಹಲೋಕದ ಸುಖಕರವಾದ ಜೀವನ 

ಹಾಗೂ ಪರಲೋಕದ ವಿಜಯೀ ಜೀವನಕ್ಕೆ ಅತ್ಯನಿವಾರ್ಯವಾಗಿದೆ.


ಮನುಷ್ಯನ ದೇಹಕ್ಕೆ ಅನೇಕ ಮಾರಕ ರೋಗಗಳು ಬಾಧಿಸಿ ದೇಹವನ್ನು ನಾಶಮಾಡಿ ಬಿಡುವಂತೆ ಹೃದಯಕ್ಕೂ ಅನೇಕ ಮಾರಕ ರೋಗಗಳು ಬಾಧಿಸಿ ಮನುಷ್ಯ ದೇಹ ಹಾಗೂ ಹೃದಯಗಳನ್ನು ಒಂದೇ ರೀತಿ ನಾಶ ಮಾಡಿ ಬಿಡುತ್ತವೆ.

ಅಂತಹ ಅನೇಕ ರೋಗಗಳಲ್ಲಿ ಅತಿಮಾರಕವಾದ ರೋಗಗಳಾಗಿವೆ ಅಹಂಕಾರ,ಅಸೂಯೆ,ಹಗೆತನ,ಮುಂತಾದವುಗಳು.

ಅದರಲ್ಲೂ ಅತಿಮಾರಕವಾದ ರೋಗ ಅಹಂಕಾರವಾಗಿದೆ.


ಈ ಅಹಂಕಾರದ ಬಗ್ಗೆ ವಿದ್ವಾಂಸರೆಲ್ಲಾ ಹೇಳಿರುವುದು


داء عضال


ಅಂದರೆ ಮಹಾಮಾರಕ ರೋಗ ಎಂದಾಗಿದೆ.


ಇದರಿಂದಾಗಿಯೇ ನೆಬಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಅಹಂಕಾರಿ ಸ್ವರ್ಗ ಪ್ರವೇಶಿಸಲಾರ ಎಂದು ಹೇಳದೆ ಅಹಂಕಾರದ ಒಂದು ಅಣುಆಂಶ ಹೃದಯದಲ್ಲಿದ್ದರೆ ಸ್ವರ್ಗ ಪ್ರವೇಶಿಸಲಾರ ಎಂದು ಹೇಳಿರುವುದು.


ಆದ್ದರಿಂದ ತಸವ್ವುಫಿನಲ್ಲಿ ಮುಖ್ಯವೆನಿಸುವುದು ಮನುಷ್ಯನ ಹೃದಯವಾಗಿರುತ್ತದೆ.ಅಲ್ಲಿ ವೇಷಭೂಷಣಗಳಾಗಲೀ ಪ್ರವೃತಿಗಳಾಗಲೀ ಮುಖ್ಯವೆನಿಸುವುದೇ ಇಲ್ಲ.ಅದೆಲ್ಲಾ ಹೃದಯದ ಹಿಂಬಾಲಕರಾಗಿಯೇ ಇರುತ್ತವೆ.

ಇದರಿಂದಾಗಿಯೇ ತಸವ್ವುಫಿನ ಮಷಾಇಖ್ ಗಳು ಯಾವಾಗಲೂ ತಮ್ಮ ಮುರೀದ್ ಗಳ ಹೃದಯವನ್ನು ನಿಯಂತ್ರಿಸುವುದರಲ್ಲಿಯೇ ಮಗ್ನರಾಗುವುದು.


ಹಾಗಾದರೆ ಈ ಹೃದಯವನ್ನು ಹೇಗೆ ನಿಯಂತ್ರಿಸಬಹುದು.


ಮುಂದು ವರಿಯುವುದು.....

ರಂಜಾನ್ ಪಾವನ ಮಾಸ

ರಂಜಾನ್ ಪಾವನ ಮಾಸ ನಮ್ಮಲ್ಲಿರುವ ಕೆಲವು ಕೆಟ್ಟ ಆಹಾರ ಪದ್ಧತಿಗಳನ್ನು ತೊಡೆದುಹಾಕಲು,ಹಾಗೂ ಜೊತೆಗೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಒಂದು ಅವಕಾಶವಾಗಿದೆ, ...